ಕೆರಗೋಡು ಗದ್ದಲಕ್ಕೆ ಶಾಸಕ ರವಿಕುಮಾರ್ ಗಣಿಗ ಮೂಲ ಕಾರಣ: ವಿವರಣೆ ಕೊಟ್ಟ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

Keragodu Lathigeorge case Former minister CS Puttaraju press conference mandya
Published on

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ತೆರವು ವಿಚಾರವಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಲು ಸ್ಥಳೀಯ ಶಾಸಕ ರವಿಕುಮಾರ್ ಗಣಿಗ ಅವರೇ ಮೂಲ ಕಾರಣ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಗಂಭೀರ ಆರೋಪ ಮಾಡಿದರು.

ಧ್ವಜಸ್ತಂಭ ಸ್ಥಾಪನೆಗೆ ಶಾಸಕ ರವಿಕುಮಾರ್ ಅವರೇ ಒಪ್ಪಿಗೆ ನೀಡಿದ್ದರು. ಜ.20ರಂದು ಧ್ವಜಸ್ತಂಭ ಲೋಕಾರ್ಪಣೆಗೆ ಅವರನ್ನು ಕರೆಯಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾಡಳಿತದ ಮೇಲೆ ಒತ್ತಡ ತಂದು ರಾತ್ರೋರಾತ್ರಿ ಅದನ್ನು ತೆರವುಗೊಳಿಸಲು ಮುಂದಾದರು. ಇದರಿಂದಲೇ ಗ್ರಾಮಸ್ಥರು ರೊಚ್ಚಿಗೇಳುವಂತೆ ಮಾಡಿತು. ಬಳಿಕ ಪಕ್ಷಾತೀತವಾಗಿ ಬೃಹತ್ ಪಾದಯಾತ್ರೆ ನಡೆಸಿ ಹೋರಾಟ ಮಾಡಿದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೆರಗೋಡು ಗ್ರಾಮದಲ್ಲಿ 9 ದಿನ ಹನುಮಾನ್ ಧ್ವಜ ಹಾರಾಡಿದೆ. ರಾತ್ರೋರಾತ್ರಿ ಹೋಗಿ ಹನುಮಾನ್ ಧ್ವಜವನ್ನು ಇಳಿಸಿ, ರಾಷ್ಟ್ರಧ್ವಜವನ್ನು ಹಾರಿಸುವ ಪ್ರಮೇಯವಾದರೂ ಏನಿತ್ತು?. ರಾಷ್ಟ್ರ ಧ್ವಜವನ್ನು ಯಾವಾಗ ಬೇಕಾದರೂ ಹಾರಿಸುವುದು ಕಾನೂನುಬಾಹಿರ. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದರೂ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಅವರು ಏಕೆ ಶಾಂತಿ ಸಭೆ ನಡೆಸಿ ಬಗೆಹರಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಕೆರಗೋಡು ಗ್ರಾಮಸ್ಥರು ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸಿದ್ದೀರಿ. ಪ್ರಕರಣ ಇಷ್ಟೊಂದು ವಿವಾದ ಸ್ವರೂಪ ಪಡೆಯಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರಮುಖ ಕಾರಣವಾಗಿದ್ದು, ಮೊದಲು ಇದನ್ನು ಸರಿಮಾಡಿ ಎಂದು ಸಚಿವರ ವಿರುದ್ಧ ಹರಿಹಾಯ್ದರು.

ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಮುಖಂಡ ಸಾತನೂರು ಜಯರಾಂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net