

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಾನ್ ಧ್ವಜ ತೆರವಿಗೆ ಸಂಬಂಧಿಸಿದಂತೆ ಶಾಸಕ ರವಿಕುಮಾರ್ ಗಣಿಗ ಪಾತ್ರವೇನೂ ಇಲ್ಲ ಎಂದು ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ತಿಳಿಸಿದರು.
2023ರ ನ.28ರಂದು ಶ್ರೀರಾಮ ಭಜನಾ ಮಂಡಳಿ ಹಾಗೂ ಅಯ್ಯಪ್ಪಸ್ವಾಮಿ ಭಜನಾ ಮಂಡಳಿ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಧ್ವಜಸ್ತಂಭ ಸ್ಥಾಪನೆಗೆ ಅನುಮತಿ ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಡಿ.29ರಂದು ಗೌರಿಶಂಕರ ಸೇವಾ ಟ್ರಸ್ಟ್‌ನವರು ರಂಗಮಂದಿರದ ಆವರಣದಲ್ಲಿ ಧ್ವಜಸ್ತಂಭ ನಿರ್ಮಿಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಗ್ರಾಪಂ ಸಭೆಯಲ್ಲಿ ಗೌರಿಶಂಕರ ಸೇವಾ ಟ್ರಸ್ಟ್ ನೀಡಿದ ಅರ್ಜಿ ಸಂಬಂಧ ಚರ್ಚೆ ನಡೆಸಲಾಯಿತು. 22ರಲ್ಲಿ 20 ಸದಸ್ಯರು ಸಭೆಗೆ ಹಾಜರಾಗಿದ್ದರು. ಇದರಲ್ಲಿ ಇಬ್ಬರು ತಟಸ್ಥ ನಿಲುವು ತಾಳಿದರೆ, ಒರ್ವ ಸದಸ್ಯ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ 18 ಮಂದಿ ಸದಸ್ಯರು ಧ್ವಜ ಸ್ತಂಭದ ಸ್ಥಾಪನೆ ಪರವಾಗಿ ಸಹಿ ಹಾಕಿ ಸಮ್ಮತಿ ಸೂಚಿಸಿದರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನ್ನು ಸಭೆಯ ನಿರ್ಣಯದಂತೆ ಜ.5ರಂದು ನಾನು ಮತ್ತು ಪಿಡಿಒ ಸ್ಥಳ ಪರಿಶೀಲನೆ ನಡೆಸಿ ಧ್ವಜಸ್ತಂಭ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು. ಆದರೆ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾಗೂ ನಾಡಧ್ವಜ ಹಾರಿಸುವುದಕ್ಕಷ್ಟೇ ಟ್ರಸ್ಟ್‌ನವರು ಒಪ್ಪಿಗೆ ಸೂಚಿಸಿದ್ದರು. ಈ ಮಧ್ಯೆ ಜ.20ರಂದು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಿದ್ದರು. ಮರುದಿನವೇ ಗ್ರಾಮದ ಕೆಲವರು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗಿದೆಯೇ ಎಂದು 30 ರಿಂದ 40 ಜನರು ಕಚೇರಿಗೆ ಆಗಮಿಸಿ ಪಿಡಿಒ ಅವರನ್ನು ಪ್ರಶ್ನಿಸಿದರು ಎಂದು ವಿವರಿಸಿದರು.
22ರಂದು ಶ್ರೀರಾಮಮಂದಿರ ಉದ್ಘಾಟನೆ ಇರುವುದರಿಂದ ಯಥಾಸ್ಥಿತಿ ಕಾಪಾಡುವ ನಿರ್ಧಾರ ಕೈಗೊಳ್ಳಲಾಯಿತು. ಗಣರಾಜ್ಯೋತ್ಸವ ದಿನ ರಾಷ್ಟ್ರಧ್ವಜ ಹಾರಿಸಿ ಸಂಜೆ ಕೆಳಗಿಳಿಸಲಾಗಿತ್ತು. ನಂತರ ಟ್ರಸ್ಟ್‌ನವರು ಹನುಮಾನ್ ಧ್ವಜವನ್ನು ಮತ್ತೆ ಹಾರಿಸಿದ ವಿಷಯ ತಿಳಿದು ನಾವು ಸ್ಥಳಕ್ಕೆ ತೆರಳಿ ಅವರಿಗೆ ತೆರವು ಮಾಡಬೇಕೆಂದು ಸೂಚನೆ ನೀಡಿದೆವು. ಜ.27ರಂದು ತಾಪಂ ಇಒ ವೀಣಾ ಇತರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ಸದಸ್ಯರೊಂದಿಗೆ ಚರ್ಚಿಸಿ ಧ್ವಜ ತೆರವುಗೊಳಿಸುವಂತೆ ಸೂಚಿಸಿದ್ದರು. ಮರುದಿನ ಬೆಳಗ್ಗೆಯೇ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಧ್ವಜ ತೆರವುಗೊಳಿಸುವುದಕ್ಕೆ ಬಂದಿರುವ ವಿಚಾರ ನಮಗೆ ತಿಳಿಯಿತು. ನಂತರ ವಿವಾದ ಹುಟ್ಟಿಕೊಂಡು ಅಹಿತರ ಘಟನೆಗೆ ಕಾರಣವಾಯಿತು. ಇದರಲ್ಲಿ ಶಾಸಕರ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಎಸ್ಸಿ ವಿಭಾಗದ ಅಧ್ಯಕ್ಷ ಶ್ರೀಧರ್, ಕಾ.ಪೂ.ರಮೇಶ್ ಇದ್ದರು.