ಫೆ.9ಕ್ಕೆ ಮಂಡ್ಯ ನಗರ ಬಂದ್: ಸಹಕರಿಸುವಂತೆ ಹಿಂದುಪರ ಸಂಘಟನೆಗಳ ಮನವಿ

Keragodu controversy mandya
Published on

ಮಂಡ್ಯ: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮಾನ್ ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಫೆ.9ರಂದು ಮಂಡ್ಯ ನಗರ ಬಂದ್ ಹಿಂದು ಪರ ಸಂಘಟನೆಗಳು ಕರೆ ನೀಡಿವೆ. ಈ ನಡುವೆ 9ರ ಬಂದ್ ವಿರೋಧಿಸಿ ಫೆ.7ರಂದು ಕರೆ ನೀಡಿದ್ದ ಮಂಡ್ಯ ನಗರ ಬಂದ್ ಅನ್ನು ಸಮಾನ ಮನಸ್ಕರ ವೇದಿಕೆ ಹಿಂಪಡೆದಿದೆ.

ಬಂದ್‌ಗೆ ಸಂಬಂಧಿಸಿದಂತೆ ಪ್ರಕಟಣೆ ನೀಡಿರುವ ವಿಶ್ವ ಹಿಂದು ಪರಿಷತ್, ಭಜರಂಗದಳ, ಶ್ರೀರಾಮ ಭಜನಾ ಮಂಡಳಿ, ಹನುಮ ದೇವರಿಗೆ ಆಗಿರುವ ಅಪಮಾನ ಖಂಡಿಸಿ ಹಾಗೂ ಹನುಮಾನ್ ಧ್ವಜವನ್ನು ಮತ್ತೆ ಹಾರಿಸಬೇಕೆಂದು ಆಗ್ರಹಿಸಿ ಕರೆ ನೀಡಿರುವ ಬಂದ್‌ಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದೆ.

ಹಿಂದು ವಿರೋಧಿ ಕಾಂಗ್ರೆಸ್‌ನ ನೀತಿಯಿಂದ ಹನುಮ ದೇವರಿಗೆ ಅವಮಾನವಾಗಿದೆ. ಅರ್ಜುನ ಸ್ತಂಭದಲ್ಲಿದ್ದ ಹನುಮಾನ್ ಧ್ವಜವನ್ನು ಇಳಿಸಿ ಮಧ್ಯಾಹ್ನ ರಾಷ್ಟ್ರಧ್ವಜವನ್ನು ಮುಕ್ಕಾಲು ಕಂಬದವರೆಗೆ ಹಾರಿಸಲಾಗಿದೆ. ಈ ವೇಳೆ ಅಧಿಕಾರಿಗಳು ರಾಷ್ಟ್ರಗೀತೆ ಹಾಡದೇ ಹಾಗೂ ಗ್ರಾಮಸ್ಥರು ಹಾಡಲು ಬಿಡದೇ ಪೊಲೀಸರಿಂದ ಲಾಠಿ ಜಾರ್ಜ್ ಮಾಡಿಸಲಾಗಿದೆ. ಇದು ರಾಷ್ಟ್ರಕ್ಕೆ, ಹಿಂದು ಧರ್ಮ ಹಾಗೂ ಹನುಮ ದೇವರಿಗೆ ಮಾಡಿದ ಅಪಮಾನ. ಇದನ್ನು ಖಂಡಿಸಿ 9ರಂದು ಮಂಡ್ಯ ನಗರದ ಸ್ವಯಂ ಪ್ರೇರಿತ ಬಂದ್ ಮಾಡಲು ಸಹಕರಿಸುವಂತೆ ಮನವಿ ಮಾಡಲಾಗಿದೆ.

ಅಂದು ಬೆಳಗ್ಗೆ 9ಗಂಟೆಗೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ನಗರದ ರೈಲ್ವೆ ನಿಲ್ದಾಣದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಬಳಿಕ ಹನುಮಾನ್ ಚಾಲೀಸ ಪಠಣ ಮಾಡಿ ಬಳಿಕ ಮನವಿ ಸಲ್ಲಿಸಲಿದ್ದಾರೆ. ಅಂದಿನ ಪ್ರತಿಭಟನೆಯಲ್ಲಿ ಹಿಂದು ಪರ ಸಂಘಟನೆಗಳ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಇದಲ್ಲದೆ ಕೆರಗೋಡು ಗ್ರಾಮಸ್ಥರು ಬೈಕ್‌ನಲ್ಲಿ ಮಂಡ್ಯಕ್ಕೆ ಆಗಮಿಸಿ ಬಂದ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net