ಕೇರಾ ಸುರಕ್ಷಾ ವಿಮಾ ಯೋಜನೆ ವರದಾನ

Published on

ತೆಂಗಿನ ಗೊನೆಗಾರರಿಗೆ ತೋಟಗಾರಿಕೆ ಇಲಾಖೆ ಸೌಲಭ್ಯ

ಮದ್ದೂರು: ಕಾಯಿ ಅಥವಾ ಎಳನೀರು ಕೊಯ್ದು ಮಾರಾಟ ಮಾಡುವ ಗೊನೆಗಾರರ ಸುರಕ್ಷತೆ ದೃಷ್ಟಿಯಿಂದ ತೆಂಗು ಅಭಿವೃದ್ಧಿ ಮಂಡಳಿ ಫ್ರೆಂಡ್ಸ್ ಆಫ್ ಕೋಕನಟ್ ಟ್ರೀಸ್ ಕೇರಾ ಸುರಕ್ಷಾ ವಿಮಾ ಯೋಜನೆ ವರದಾನವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ ತಿಳಿಸಿದ್ದಾರೆ.

ತಾಲೂಕಿನಲ್ಲಿ 6,750 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಕಾಯಿ ಅಥವಾ ಎಳನೀರು ಕೊಯ್ದು ಮಾಡುವ ಗೊನೆಗಾರರ ಸುರಕ್ಷತಾ ದೃಷ್ಟಿಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದು ವೈಯಕ್ತಿಕ ಅಪಘಾತ ವಿಮಾ ಯೋಜನೆಯಾಗಿದ್ದು, ಗೊನೆಗಾರರಿಗೆ ಏನೇ ಅಪಘಾತ ಸಂಭವಿಸಿದರೂ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ವಿವಿಧ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.

ತೆಂಗಿನ ಮರ ಹತ್ತುವವರು, ತೆಂಗಿನಕಾಯಿ ಕೀಳುವವರು, ನೀರಾ ತಂತ್ರಜ್ಞರು ಅಪಘಾತಕ್ಕೊಳಗಾಗಿ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲರಾದಲ್ಲಿ ದುರ್ಘಟನೆ, ಅಪಘಾತವಾದ 7 ದಿನಗಳೊಳಗಾಗಿ ತೆಂಗು ಅಭಿವೃದ್ಧಿ ಮಂಡಳಿಗೆ ಮಾಹಿತಿ ನೀಡಬೇಕು. ಮರಣ ಹೊಂದಿದಲ್ಲಿ 7 ಲಕ್ಷ ರೂ., ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದಲ್ಲಿ 3.50 ಲಕ್ಷ ರೂ., ಆಸ್ಪತ್ರೆ ವೆಚ್ಚ 2 ಲಕ್ಷ ರೂ., ತಾತ್ಕಾಲಿಕ ಅಂಗವಿಕಲತೆ ಹೊಂದಿದ ಕೊಯ್ದುಗಾರನಿಗೆ ಗರಿಷ್ಠ 21,000., ಆಂಬುಲೆನ್ಸ್ ಖರ್ಚು 3,500 ರೂ. ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5,500 ರೂ. ವಿಮಾ ಕಂಪನಿಯಿಂದ ನೀಡಲಾಗುತ್ತಿದೆ.

ಆಸಕ್ತ ತೆಂಗು ತೋಟಗಾರರು ತೆಂಗು ಅಭಿವೃದ್ಧಿ ಮಂಡಳಿಯ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆಧಾರ್‌ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿಯೊಂದಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿಮಾ ಪಾಲಿಸಿ ಹೊಂದಬಹುದು. ವಾರ್ಷಿಕ ವಿಮಾ ಕಂತಿನ ಹಣ 956 ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.75:25 ರಂತೆ ತೆಂಗು ಅಭಿವೃದ್ಧಿ ಮಂಡಳಿ ವಂತಿಕೆ 717ರೂ. ಹಾಗೂ ರೈತರ ವಂತಿಕೆ 239 ರೂ. ಒಳಗೊಂಡಿರುತ್ತದೆ. ರೈತರು ವಿಮಾ ಕಂತಿನ ವಂತಿಕೆಯನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಡಿಡಿ ಮೂಲಕ ಅಥವಾ ಆನ್‌ಲೈನ್ ಮೂಲಕ ಪಾವತಿಸಬಹುದು. ಮಾಹಿತಿಗೆ ಜಾಲತಾಣ ತಿತಿತಿ.ಛಿಛಿಟಿಣ. ಚಿಡಿಜ..ಟಿ/ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net