ತೆಂಗು ಕಾರ್ಮಿಕರಿಗೆ ಕೇರಾ ಸುರಕ್ಷಾ ನೆರವು

29 kdr 11
Published on

ಕಡೂರು: ಕೇಂದ್ರ ಸರ್ಕಾರವೂ ತೆಂಗಿನ ಮರ ಏರುವ ಕಾರ್ಮಿಕರಿಗಾಗಿ ಕೇರಾ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರ ರಕ್ಷಣೆ ಜತೆಗೆ ಅವರ ಅವಲಂಬಿತ ಕುಟುಂಬಕ್ಕೂ ಅನುಕೂಲ ಕಲ್ಪಿಸಲು ಮುಂದಾಗಿದೆ.

ಜಮೀನು, ತೋಟದಲ್ಲಿರುವ ತೆಂಗಿನ ಮರ ಏರಿ ಎಳನೀರು, ಕಾಯಿ ಕೀಳುವವರು, ತೆಂಗಿನ ಮರದಲ್ಲಿ ನೀರಾ ಇಳಿಸುವ ಕಾರ್ಮಿಕರಿಗೆ ಮರ ಏರುವ ವೇಳೆ ಸಂಭವಿಸುವ ಅವಘಡದಿಂದ ಸಾಕಷ್ಟು ತೊಂದರೆಯಾಗಲಿದೆ. ಇಂತಹ ಸಂದರ್ಭದಲ್ಲಿ ನೆರವಾಗಲು ಕೇಂದ್ರ ಸರ್ಕಾರ ಕೇರಾ ಸುರಕ್ಷಾ ಯೋಜನೆ ಜಾರಿಗೊಳಿಸಿದೆ. ಈ ಬಗ್ಗೆ ತೆಂಗುಬೆಳೆಗಾರರು ಹಾಗೂ ಕಾರ್ಮಿಕರಿಗೆ ಜಾಗೃತಿ ಮೂಡಿಸಲು ತೋಟಗಾರಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಜಿಲ್ಲೆಯ ಬಯಲುಸೀಮೆ ಭಾಗದ ಕಡೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶ ಎಂದು ಗುರುತಿಸಿಕೊಂಡಿದೆ. ಸುಮಾರು 35,198 ಹೆಕ್ಟರ್ ಪ್ರದೇಶದಲ್ಲಿ 2,84,374 ತೆಂಗಿನ ಮರಗಳು ನೋಂದಣಿಯಾಗಿವೆ. ಈ ತಾಲೂಕಿನಲ್ಲಿ ತೆಂಗಿನ ಮರ ಏರುವ ಕಾರ್ಮಿಕರಿಗಾಗಿಯೇ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ.

ತೆಂಗು ಅಭಿವೃದ್ಧಿ ಮಂಡಳಿ, ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಸಚಿವಾಲಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ತೆಂಗು ಬೆಳೆಯುವ ರಾಜ್ಯಗಳಲ್ಲಿ ಕೇರಾ ಸುರಕ್ಷಾ ವಿಮೆ ಯೋಜನೆ ಜಾರಿಗೊಳಿಸಲಾಗಿದೆ. ಇದು ತೆಂಗಿನ ಮರ ಏರಿ ಎಳನೀರು, ಕಾಯಿಗಳನ್ನು ಕೀಳುವವರಿಗೆ, ನೀರಾ ಸೇರಿದಂತೆ ಇತರೆ ತೆಂಗಿನ ಮರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ವಿಮಾ ದೊರೆಯಲಿದೆ. ತೆಂಗಿನ ಮರದಲ್ಲಿ ಕಾರ್ಯನಿರ್ವಹಿಸುವ ವೇಳಗೆ ಅಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಗರಿಷ್ಠ 7 ಲಕ್ಷ ಮೊತ್ತದವರೆಗೆ ವಿಮಾ ಪರಿಹಾರ ದೊರೆಯಲಿದೆ. ಇದು ಅಪಘಾತದ ವಿಮೆಯಾಗಿದ್ದು, ವಾರ್ಷಿಕವಾಗಿ 965 ರೂ. ಪಾವತಿಸಬೇಕಿದೆ. ಇದರಲ್ಲಿ ತೆಂಗು ಅಭಿವೃದ್ಧಿ ಮಂಡಳಿ 717 ರೂ. ಪಾವತಿಸಲಿದ್ದು, ಕಾರ್ಮಿಕರು 239 ರೂ.ಗಳನ್ನು ವಾರ್ಷಿಕ ಕಂತಿನ ರೂಪದಲ್ಲಿ ಪಾವತಿಸಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net