ಕೇಣಿಯಲ್ಲಿ ಖಾಸಗಿ ಬಂದರು ಸರ್ವೇಗೆ ಸ್ಥಳೀಯರ ವಿರೋಧ

Keni-Port
Published on

ಅಂಕೋಲಾ: ಕೇಣಿಯಲ್ಲಿ ಜೆಎಸ್‌ಡಬ್ಲು ಕಂಪನಿಯಿAದ ಗ್ರೀನ್ ಫೀಲ್ಡ್ ಬಂದರು ನಿರ್ಮಾಣದ ಭೂ ವಿಜ್ಞಾನ ಸಮೀಕ್ಷೆ ವಿರುದ್ಧ ಸ್ಥಳೀಯ ಮೀನುಗಾರರ ಆಕ್ರೋಶ ಭುಗಿಲೆದ್ದಿದೆ. ನಿಷೇಧಾಜ್ಞೆಯನ್ನೂ ಮುರಿದು ಸ್ಥಳೀಯರು ಸೋಮವಾರ ಸಮುದ್ರಕ್ಕಿಳಿದು ತೀವ್ರ ಪ್ರತಿಭಟನೆ ನಡೆಸಿದರು.

ಜಿಲ್ಲಾಽಕಾರಿ ಅವರು ಬಾವಿಕೇರಿ ಹಾಗೂ ಕೇಣಿ ಭಾಗದಲ್ಲಿ ಫೆ.24 ಹಾಗೂ 25 ರಂದು ನಿಷೇಧಾಜ್ಞೆ ಹೊರಡಿಸಿ, ಪ್ರತಿಭಟನೆಗೆ ನಿರ್ಬಂಧ ಹೇರಿದ್ದರು. ಆದರೆ, ಅದಕ್ಕೆ ಕ್ಯಾರೇ ಎನ್ನದೆ, ಕೇಣಿಯಲ್ಲಿ ಉದ್ದೇಶಿತ ಬಂದರು ನಿರ್ಮಾಣ ಸ್ಥಳದಲ್ಲಿ ಸೇರಿದ ನೂರಾರು ಮೀನುಗಾರರು ಸರ್ಕಾರ ಹಾಗೂ ಕಂಪನಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೆಲ ಹೊತ್ತಿನ ನಂತರ ಸಮುದ್ರಕ್ಕೆ ಇಳಿದು, ನೀರಿನಲ್ಲಿ ಅರ್ಧ ಮುಳುಗಿ ಪ್ರತಿಭಟನೆ ನಡೆಸಿದರು.

ಮಹಿಳೆಯರು ಅಸ್ವಸ್ತ

ಸುಡು ಬಿಸಿಲಿನಲ್ಲಿ ಸುಮಾರು ಐದು ತಾಸು ಪ್ರತಿಭಟನಾಕಾರರು ಸಮುದ್ರದಲ್ಲೇ ಪ್ರತಿಭಟನೆ ಮುಂದುವರಿಸಿದರು.ಈ ಸಂದರ್ಭದಲ್ಲಿ ನಾಲ್ವರು ಮಹಿಳೆಯರು ಅಸ್ವಸ್ತರಾಗಿದ್ದು, ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿತು. ಇತ್ತ ಪ್ರತಿಭಟನೆ ಮುಂದುವರಿಯಿತು. ಮಧ್ಯಾಹ್ನ ಸ್ಥಳದಲ್ಲೇ ಗಂಜಿ ಊಟಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಭಟನಾಕಾರರು ಸಮುದ್ರಕ್ಕಿಳಿಯದಂತೆ ನಡೆಯಲು ಪೊಲೀಸರು ನಡೆಸಿದ ಪ್ರಯತ್ನಗಳು ವಿಫಲವಾದವು.

ಮುಖಂಡರ ಸಾಥ್:

ಕೇಣಿಯಲ್ಲಿ ಸಾವಿರಾರು ಕುಟುಂಬಗಳು ಪಾರಂಪರಿಕವಾಗಿ ಮೀನುಗಾರಿಕೆ ನಡೆಸುತ್ತ ಬಂದಿವೆ. ಬಂದರು ನಿರ್ಮಾಣದಿಂದ ಮೀನುಗಾರಿಕೆಗೆಗೆ ತಡೆ ಬೀಳಲಿದೆ ಎಂಬುದು ಸ್ಥಳೀಯರ ಆತಂಕ. ಮೀನುಗಾರರ ಪ್ರತಿಭಟನೆಗೆ ಬಿಜೆಪಿಯ ಎಂಎಲ್‌ಸಿ ಗಣಪತಿ ಉಳ್ವೇಕರ್, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಸುಜಾತಾ ಗಾಂವಕರ್ ಸೇರಿ ಹಲವರು ಪ್ರತಿಭಟನೆಗೆ ಸಾಥ್ ನೀಡಿದರು. ಕಾರವಾರದ ಮುದಗಾ, ಅಂಕೋಲಾದ ಬೇಲೆಕೇರಿ, ಬಾವಿಕೇರಿ, ಬೆಂಳಬಾರ, ಮಂಜಗುಣಿ ಸೇರಿ ವಿವಿಧೆಡೆಯ ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿನ್ನೆಲೆ:

ಕೇಣಿಯಲ್ಲಿ ಬಂದರು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಜೆಎಸ್‌ಡಬ್ಲು ಕಂಪನಿಯ ಜತೆ ಒಪ್ಪಂದ ಮಾಡಿಕೊಂಡಿದೆ. ಕೇಣಿ ಸಮುದ್ರ ತೀರದಲ್ಲಿ ಬಂದರು ಇಲಾಖೆಗೆ ಜಾಗವನ್ನು ಲೀಸ್‌ಗೆ ನೀಡಿದ್ದು, ಕಂಪನಿಯು ಸುಮಾರು 4119 ಕೋಟಿ ರೂ.ಗಳನ್ನು ಹೂಡಿಕೆ ಮಾಡಿ ಹಡಗು ನಿಲ್ದಾಣ (ಜಟ್ಟಿ) ಹಾಗೂ ಸಂಗ್ರಹಾಗಾರಗಳನ್ನು ನಿರ್ಮಾಣ ಮಾಡಲಿದೆ. ಅಲ್ಲದೇ, ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ರಸ್ತೆ ಹಾಗೂ ರೈಲ್ವೆ ಮಾರ್ಗಗಳನ್ನು ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಲಿದೆ. ಈ ಹೆದ್ದಾರಿ ಲಿಂಕ್ ರಸ್ತೆ ನಿರ್ಮಾಣಕ್ಕೆ ಸುಮಾರು 70 ಕಟ್ಟಡ ಹಾಗೂ ಭೂಮಿ ಸ್ವಾಧೀನವಾಗಲಿದೆ ಎಂದು ಇತ್ತೀಚೆಗೆ ಕರ್ನಾಟಕ ಮೆರಿಟೈಮ್ ಬೋರ್ಡ್ ಸಿಇಒ ಜಯರಾಮ ರಾಯಪುರೆ ತಿಳಿಸಿದ್ದರು.

ಬಂದರು ನಿರ್ಮಾಣಕ್ಕೆ ಭೂ ವಿಜ್ಞಾನ ಸರ್ವೇಯನ್ನು ಕೆಲ ತಿಂಗಳ ಹಿಂದೆ ಕಂಪನಿ ಪ್ರಾರಂಭಿಸಿತ್ತು. ಆದರೆ, ಸ್ಥಳೀಯರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸರ್ವೇ ಸ್ಥಗಿತ ಮಾಡಲಾಗಿತ್ತು. ಸೋಮವಾರ ಸಾಕಷ್ಟು ಪೊಲೀಸ್ ಭದ್ರತೆಯಲ್ಲಿ ಮರು ಸರ್ವೇ ಕಾರ್ಯ ಕೈಗೊಳ್ಳಲು ಸಿದ್ಧತೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಣಿ ಹಾಗೂ ಬಾವಿಕೇರಿ ಭಾಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net