

ಸಾಸ್ವೆಹಳ್ಳಿ: ಮಾನವೀಯತೆ ಬೆಳೆಸುವಲ್ಲಿ ಗುರುಗಳ ಪಾತ್ರ ಮಹತ್ವದ್ದು, ಅವರ ಮಾರ್ಗದರ್ಶನದಿಂದ ಜೀವನದಲ್ಲಿ ಒಳ್ಳೆಯ ಸ್ಥಾನಮಾನ, ಯಶಸ್ಸು ತಂದುಕೊಡುತ್ತದೆ ಎಂದು ಚನ್ನಗಿರಿ ತಾಲೂಕು ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಸ್ವಾಮಿ ಹೇಳಿದರು.
ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ವೀರಭದ್ರೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ 1993-94ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿವೃತ್ತ ಶಿಕ್ಷಕ ಓಂಕಾರ ನಾಯಕ್ ಮಾತನಾಡಿ, ಶಿಕ್ಷಕ ವೃತ್ತಿಯು ಗೌರವಯುತವಾದ ವೃತ್ತಿಯಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಗುರುಗಳ ಮೇಲೆ ಇರುತ್ತದೆ. ನಿವೃತ್ತಿಯ ನಂತರ ವಿದ್ಯಾರ್ಥಿಗಳು ನಮ್ಮನ್ನು ತಂದೆ- ತಾಯಿಯಂತೆ ಪ್ರೀತಿಸಿ ಗೌರವಿಸುತ್ತಾರೆ ಎಂದರು.
ವೀರಭದ್ರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಕಾಂತಪ್ಪ, ಕರಿಬಸಪ್ಪ, ಈಶ್ವರ್ನಾಯ್್ಕ ಲಕ್ಷ್ಮಣಪ್ಪ, ಈಶ್ವರಪ್ಪ, ಹಾಲೇಶಪ್ಪ, ಪಂಚಾಕ್ಷರಯ್ಯ ಮಾತನಾಡಿದರು.
ಶಾಲಾ ಆಡಳಿತ ಮಂಡಳಿ ಸದಸ್ಯರಾದ ಕೆ.ಜಿ. ಸೋಮಶೇಖರಪ್ಪ ಗೌಡ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಸಿ ನಾಗರಾಜ್, ತಾಲೂಕು ಎಸ್ಡಿಎಂಸಿ ಸಂಘದ ಅಧ್ಯಕ್ಷ ಶಿವಲಿಂಗಪ್ಪ, ಮುಖ್ಯ ಶಿಕ್ಷಕಿ ಕೆ.ಎಂ. ಸುಧಾ ಹಾಗೂ ಶಿಕ್ಷಕರು ಇದ್ದರು.