

ಮೈಸೂರು: ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಅಗ್ರಹಾರ ವೃತ್ತದಲ್ಲಿ ಶುಕ್ರವಾರ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಜಯಂತಿ ಆಚರಿಸಲಾಯಿತು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಕೆಂಗಲ್ ಹನುಂತಯ್ಯ ದೇಶಕಂಡ ಅಪರೂಪದ ರಾಜಕಾರಣಿ. ಕರ್ನಾಟಕದ ಏಕೀಕರಣವು ಅವರ ಮಹಾನ್ ಸಾಧನೆ. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ವಿಧಾನಸೌಧ ನಿರ್ಮಾಣ ಮಾಡಿ ಸರ್ಕಾರಿ ಕೆಲಸ ದೇವರ ಕೆಲಸ ಎಂದು ನಾಮಫಲಕ ಹಾಕಿದ್ದರು. ಕೇಂದ್ರ ರೈಲ್ವೆ ಮಂತ್ರಿಗಳಾಗಿಯೂ ಸಹ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪ್ರತಿಯೊಬ್ಬರು ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ, ಹಳೇ ಮೈಸೂರು ರಾಜ್ಯ ಒಕ್ಕಲಿಗರ ಪ್ರಾಬಲ್ಯ ಹೊಂದಿತ್ತು. ಏಕೀಕರಣ ಆದರೆ ಒಕ್ಕಲಿಗರ ಪ್ರಾಬಲ್ಯ ಹಾಗೂ ಮುಖ್ಯಮಂತ್ರಿ ಪದವಿ ಹೋಗುತ್ತದೆ ಎಂದು ಎಲ್ಲ ಮುಖಂಡರುಗಳು ಏಕೀಕರಣಕ್ಕೆ ವಿರೋಧ ಮಾಡಿದ್ದರು. ಆದರೆ, ಕೆಂಗಲ್ ಹನುಮಂತಯ್ಯ ಅವರು ವಿರೋಧಕ್ಕೆ ಮಣಿಯದೆ ಅಖಂಡ ಕರ್ನಾಟಕ ಆಗಲೇಬೇಕು ಎಂದು ಏಕೀಕರಣ ಬೆಂಬಲಿಸಿ ತಮ್ಮ ಮುಖ್ಯಮಂತ್ರಿ ಪದವಿಯನ್ನೇ ಕಳೆದುಕೊಂಡ ಮಹಾನ್ ನಾಯಕ ಎಂದರು.
ಸಮಾಜಸೇವಕ ಡಾ.ರಘುರಾಂ ವಾಜಪೇಯಿ ಮಾತನಾಡಿ, ಕೆಂಗಲ್ ಹನುಮಂತಯ್ಯ ದೇಶಕಂಡ ಪ್ರಾಮಾಣಿಕ ರಾಜಕಾರಣಿ. ಭವ್ಯವಾದ ವಿಧಾನಸೌಧ ಕಟ್ಟುವಾಗ ಕಟ್ಟಡದ ಇಂಜಿನಿಯರ್ ಅವರನ್ನು ಕರೆಯಿಸಿ ಹಾಲಿನ ಅಭಿಷೇಕ ಮಾಡಿ ಆ ಹಾಲಿನ ಮೇಲೆ ಇಂಜಿನಿಯರ್ ಅವರಿಂದ ಕೈ ಇಡಿಸಿ ‘ನಾನು ಈ ವಿಧಾನಸೌಧವನ್ನು ಕಟ್ಟುವಾಗ ಪ್ರಾಮಾಣಿಕವಾಗಿ ಕಟ್ಟುತ್ತೇನೆ. ಒಂದು ಪೈಸೆ ಹಣವನ್ನು ಮುಟ್ಟುವುದಿಲ್ಲ’ ಎಂದು ಪ್ರಮಾಣ ಮಾಡಿಸಿ ವಿಧಾನ ಸೌಧ ಕಟ್ಟಿಸಿದ ಮಹಾನ್ ಪುರುಷರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಎನ್.ಎಂ. ನವೀನ್ ಕುಮಾರ್, ಗೋವಿಂದೇಗೌಡ, ಸಿ.ಎಚ್. ಕೃಷ್ಣಯ್ಯ, ಪ್ರಭುಶಂಕರ್, ಶಿವಲಿಂಗಯ್ಯ, ನೇಹಾ, ವಿಜಯೇಂದ್ರ, ರಾಮಣ್ಣ, ಪ್ರಭಾಕರ, ಮೊಗಣ್ಣಾಚಾರ್, ಕುಮಾರ್ ಗೌಡ, ಸುಬ್ಬೇಗೌಡ, ಮಹದೇವಸ್ವಾಮಿ, ದರ್ಶನ್ ಗೌಡ, ಪದ್ಮ, ಸಿಂಧುವಳ್ಳಿ ಶಿವಕುಮಾರ್, ಅಕ್ಬರ್, ರಾಮಕೃಷ್ಣೇಗೌಡ, ಲಕ್ಷ್ಮೇಗೌಡ, ಹನುಮಂತಯ್ಯ, ಜ್ಯೋತಿ, ಬಸವರಾಜು, ಗಣೇಶ್ ಪ್ರಸಾದ್, ವಿಷ್ಣು ಹಾಗೂ ಇತರರು ಇದ್ದರು.