

ಉಡುಪಿ: ಮಕ್ಕಳಿಗೆ ದೇಶ ಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಲಾಗಿದೆ. ಪಾನ್ ಇಂಡಿಯಾ ವೇದಿಕೆ ಮೂಲಕ ಮಕ್ಕಳಿಗೆ ಇನ್ನಿತರ ರಾಜ್ಯಗಳ ಭಾಷೆಯನ್ನೂ ಕಲಿಯುವಂತಹ ಅವಕಾಶ ನೀಡಲಾಗಿದೆ. ಹೀಗಾಗಿ ಇಲ್ಲಿರುವ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನೇ ನೀಡುವಂತಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯ ಪ್ರಗತಿನಗರದ ಅಲೆವೂರಿನಲ್ಲಿ ಕೇಂದ್ರೀಯ ವಿದ್ಯಾಲಯ ಉಡುಪಿ ಶಾಲೆಯ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
29 ಕೋಟಿ ರೂ. ವೆಚ್ಚ
ಕಟ್ಟಡ ನಿರ್ಮಾಣಕ್ಕೆ 29 ಕೋಟಿ ರೂ. ಅನುದಾನ ನೀಡಲಾಗಿದ್ದು, ಡಿಸೆಂಬರ್ 2025ಕ್ಕೆ ಕಟ್ಟಡ ಪೂರ್ಣಗೊಳ್ಳಲಿದೆ. 24 ಕೊಠಡಿಗಳು, 23 ಹೆಚ್ಚುವರಿ ಕೊಠಡಿ ಸೇರಿದಂತೆ ಗ್ರಂಥಾಲಯ ಹಾಗೂ ಶೈಕ್ಷಣಿಕ ಚಟುವಟಿಕೆಗೆ ಬೇಕಾದ ಎಲ್ಲ ವ್ಯವಸ್ಥೆ ಈ ಕಟ್ಟದಲ್ಲಿ ಇರಲಿದೆ. ಕಟ್ಟಡ ನಿರ್ಮಿಸುವಾಗಲೇ ಮೂಲಸೌಲಭ್ಯ ಕೊರತೆ ಆಗದಂತೆ ಮೊದಲೇ ಎಲ್ಲ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸ್ಥಳಿಯ ಗ್ರಾಮ ಪಂಚಾಯಿತಿ ಮುತುವರ್ಜಿ ವಹಿಸಬೇಕು. ಎಲ್ಲವೂ ಲಭ್ಯವಾದ ಬಳಿಕವೇ ಶಾಲೆಯ ಲೋಕಾರ್ಪಣೆ ಹಮ್ಮಿಕೊಳ್ಳಬೇಕು ಎಂದು ಸಚಿವೆ ಶೋಭಾ ಸೂಚಿಸಿದರು.
ಯಶಸ್ಸಿಗೆ ಬೇಕು ಛಲ
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಒಂದು ರಾತ್ರಿ&ಹಗಲಿನಲ್ಲಿ ಯಶಸ್ಸು ಲಭಿಸದು. ಅದಕ್ಕೆ ಪರಿಶ್ರಮ, ಛಲ ಬೇಕು. ದೇಶದಲ್ಲಿ ಇಂದು ಸಾಮರಸ್ಯ ಮೂಡಬೇಕಾದರೆ ಅಂತಹ ಬದುಕು ಲಭ್ಯವಾಗಬೇಕಾದರೆ ವಿದ್ಯೆ ಅಣಿಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಇಂಜಿನಿಯರ್ ಶ್ರೀನಿವಾಸಕುಮಾರ್, ಕೆವಿ ಸಂಟನ್ನ ರಾಜು, ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಕಿರಣಕುಮಾರ್ ಕೊಡ್ಗಿ, ಗ್ರಾಪಂ ಅಧ್ಯಕ್ಷ ಯತೀಶ್ ಕುಮಾರ್ ಇತರರಿದ್ದರು.
ಕೆವಿ ಸಂಟನ್ ಬೆಂಗಳೂರು ಪ್ರಾಂತ್ಯದ ಡಿಸಿ ಧಮೇರ್ಂದ್ರ ಪೆಟ್ಲ ಸ್ವಾಗತಿಸಿದರು. ಕೆವಿ ಉಡುಪಿ ಪ್ರಾಂಶುಪಾಲ ನಾರಾಯಣ ರಾವ್ ವಂದಿಸಿದರು. ಕೆವಿ ಸ್ಕೂಲ್ ಶಿಕ್ಷಕಿ ಮಾರ್ಗರೇಟ್ ಅಬ್ರಹಾಂ ಹಾಗೂ ಡಯಟ್ ಪ್ರಿನ್ಸಿಪಾಲ್ ಅಶೋಕ ಕಾಮತ್ ನಿರ್ವಹಿಸಿದರು. ಶಾಲೆಯ ಸಂಗೀತ ಶಿಕ್ಷಕಿ ಪ್ರತಿಭಾ ಬಿ. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಂದೇಮಾತರಂ, ಸರಸ್ವತಿ ಗೀತೆ ಹಾಗೂ ರಾಷ್ಟ್ರಗೀತೆ ಹಾಡಿದರು. ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು