ಏಪ್ರಿಲ್‌ನಿಂದ ವಿಜ್ಞಾನ ಕಾಲೇಜು ಹೊಸ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಕಾರ‌್ಯಾರಂಭ

ctd 28 kendriaya vidalayaaaaaaaaaaa
Published on

ಚಿತ್ರದುರ್ಗ: ಎಲ್ಲವೂ ಅಂದುಕೊಂಡಂತಾದರೆ ಮುಂದಿನ ಏಪ್ರಿಲ್‌ಗೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ನೂತನ ಕಟ್ಟಡದಲ್ಲಿ ಕೇಂದ್ರೀಯ ವಿ ದ್ಯಾಲಯ ಕಾರ‌್ಯಾರಂಭವಾಗಲಿದೆ. ಬೆಂಗಳೂರು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪ್ರಾದೇಶಿಕ ಸಹಾಯಕ ಆಯುಕ್ತ ಪಿ.ಸಿ. ರಾಜು ನೇತೃತ್ವದ ತಂಡ ಸೋಮವಾರ,ಕಾಲೇಜು ಹಾಗೂ ವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಇಂಗಳದಾಳ್ ಸರ್ವೇ ನಂ 27/3ರಲ್ಲಿ ಕ್ಯಾಂಪಸ್ ನಿರ್ಮಾಣಕ್ಕಾಗಿ 9.38 ಎಕರೆ ಕಾಯ್ದಿರಿಸಲಾಗಿದ್ದು,ವಿದ್ಯಾಲಯ ಸ್ಥಾಪನೆಗೆ ಅನುಮತಿ ದೊರೆತ 2 ವರ್ಷದೊಳಗೆ 80 ಕೋಟಿ ರೂ.ವೆಚ್ಚದಲ್ಲಿ ಆಟದ ಮೈದಾನ,ಸಿಬ್ಬಂದಿ ವಸತಿಗೃಹ ಸಹಿತ ಕೇಂದ್ರೀಯ ವಿದ್ಯಾಲಯ ನಿರ್ಮಾಣವಾಗಲಿದೆ ಎಂದು ರಾಜು ಹೇಳಿದರು.

ಸ್ಥಳ ಪರಿಶೀಲನೆ ವರದಿಯನ್ನು 2 ದಿನದೊಳಗೆ ಕೇಂದ್ರ ಕಚೇರಿಗೆ ಕಳಿಸಲಾಗುವುದು,ಅನುಮತಿ ದೊರೆಯುತ್ತಿದ್ದಂತೆ ತಾತ್ಕಾಲಿಕವಾಗಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾಲಯ ಕಾರ‌್ಯಾರಂಭವಾಗಲಿದೆ. ಆರಂಭದಲ್ಲಿ 1ರಿಂದ 5ತರಗತಿ ವರೆಗೆ,ಪ್ರತಿ ತರಗತಿಗೆ 40 ರಂತೆ 200 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು.

ರಾಜ್ಯದಲ್ಲಿ 53 ವಿದ್ಯಾಲಯಗಳಿವೆ. ದುರ್ಗದಲ್ಲಿ ಆರಂಭವಾಗಲಿರುವ ವಿದ್ಯಾಲಯದ ಪ್ರವೇಶ ಮಿತಿಯನ್ನು ಬೇಡಿಕೆ ಗಮನಿಸಿ ಹೆಚ್ಚಿಸಲಾಗುವುದು ಎಂದರು.

ಸದ್ಯಕ್ಕೆ 17 ಕೊಠಡಿಗಳು,ಶೌಚಗೃಹ ಅಗತ್ಯವಿದೆ. ಈ ಕಟ್ಟಡದಲ್ಲಿ ಈ ಸೌಲಭ್ಯಗಳಿದ್ದು,ವಿದ್ಯಾಲಯವನ್ನು ಪ್ರಾರಂಭಿಸಲು ಕೊರತೆ ಇಲ್ಲ. ಸಮಾಜ ಕಲ್ಯಾಣ ಇಲಾಖೆ ಹೊಸ ಹಾಸ್ಟೆಲ್‌ನ್ನು ಸದ್ಯಕ್ಕೆ ಸಿಬ್ಬಂದಿ ವಸತಿಗೆ ಬಳಸಲಾಗುವುದು. ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ 12 ತರಗತಿಯವರೆಗೂ ವಿದ್ಯಾಭ್ಯಾಸ ದೊರೆಯಲಿದೆ.

ಕೇಂದ್ರ,ಕೇಂದ್ರದ ಸಾರ್ವಜನಿಕ,ರಾಜ್ಯಸರ್ಕಾರ,ರಾಜ್ಯದ ಸಾರ್ವಜನಿಕ ಉದ್ದಿಮೆಗಳ ನೌಕರರ ಹಾಗೂ ಸಾರ್ವಜನಿಕರ ಮಕ್ಕಳಿಗೆ ನಿಯಮಾನುಸಾರ ಪ್ರವೇಶ ಕಲ್ಪಿಸಲಾಗುವುದು.

ಕೂಡಲೇ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸುವಂತೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ತಾಕೀತು ಮಾಡಿದ್ದರು. ವಿದ್ಯಾಲಯ ಕಟ್ಟಡಕ್ಕೆ ನಿಗದಿ ಪಡಿಸಿರುವ ಸ್ಥಳವೂ ಪ್ರಶಸ್ತವಾಗಿದೆ. ಆದರೆ ಅಲ್ಲಿರುವ ವಿದ್ಯುತ್ ಮಾರ್ಗದ ಸ್ಥಳಾಂತರಕ್ಕೆ ಕೋರಲಾಗಿದೆ ಎಂದರು.

ಡಿಸಿ ಜಿ.ಆರ್.ಜೆ.ದಿವ್ಯಾಪ್ರಭು,ದಾವಣಗೆರೆ ಕೇಂದ್ರೀಯ ವಿದ್ಯಾಲಯದ ಪ್ರಾಚಾರ‌್ಯ ಬೀರಬಲ್‌ದಿಂಡ್ವಾ, ತಹಸೀಲ್ದಾರ್ ಸತ್ಯನಾರಾ ಯಣ,ಸರ್ಕಾರಿ ವಿಜ್ಞಾನ ಪದವಿ ಕಾಲೇಜು ಪ್ರಾಂಶುಪಾಲ ಹನುಂತರಾಯ,ಇಂಜಿನಿಯರ್‌ಗಳಾದ ರಾಜಗೋಪಾಲ,ಟಿ.ಎಸ್.ಮಲ್ಲಿ ಕಾರ್ಜುನ,ಚಂದ್ರಪ್ಪ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಒ.ಪರಮೇಶ್ವರಪ್ಪ,ಎ.ನಾರಾಯಣಸ್ವಾಮಿ ಅವರ ಆಪ್ತ ಕಾರ‌್ಯ ದರ್ಶಿ ಮೋಹನ್,ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net