ಕೇಂದ್ರದಿಂದ ಖೋತಾ ಬಜೆಟ್ ಮಂಡನೆ, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪ

doddaballapura
Published on

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರ ಬಜೆಟ್ ಖೋತಾ ಬಜೆಟ್ ಆಗಿದ್ದು, ದೇಶದ ಜ್ವಲಂತ ಸಮಸ್ಯೆ ಬಗೆಹರಿಸದೇ, ಅನಗತ್ಯ ವಿಚಾರ ಮುಂದಿಟ್ಟು ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಜಾಗೃತ ಭವನದಲ್ಲಿ ಸೋಮವಾರ ತಾಲೂಕು ಕನ್ನಡ ಪಕ್ಷ ಹಾಗೂ ರಾಜ್ಯ ರೈತ ಸಂಘದಿಂದ ಪ್ರಸ್ತುತ ದೇಶದ ವಿದ್ಯಮಾನಗಳು ಹಾಗೂ ಪ್ರಜಾಪ್ರಭುತ್ವದ ಅರಿವಿಗಾಗಿ ವಿಚಾರ ಸಂಕಿರಣದಲ್ಲಿ ರೈತರ ಸಮಸ್ಯೆ ಹಾಗೂ ಸವಾಲು ಕುರಿತು ಅವರು ಮಾತನಾಡಿದರು.

ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತು, ಪರ‌್ಯಾಯ ವ್ಯವಸ್ಥೆ ರೂಪಿಸಲು ಜನರೇ ತುರ್ತು ಪರಿಸ್ಥಿತಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ಬಜೆಟ್ ಖೋತಾ ಆಗಲು ನೋಟು ಅಮಾನೀಕರಣ ಹಾಗೂ ಜಿಎಸ್‌ಟಿ ಯಂತಹ ತೆರಿಗೆ ನೀತಿಗಳೇ ಕಾರಣ. ಉದ್ಯಮಿಗಳಿಗೆ ಸಾವಿರಾರು ಕೋಟಿ ಸಾಲ ನೀಡಿ ವಾಪಸ್ ಕೇಳುತ್ತಿಲ್ಲ. ಆದರೆ ರೈತರ ಸಾಲಕ್ಕೆ ಬ್ಯಾಂಕುಗಳು ನೋಟಿಸ್ ನೀಡುತ್ತಿವೆ. ಇದರಿಂದಾಗಿ ಬ್ಯಾಂಕುಗಳು ದಿವಾಳಿಯಾಗಲಿವೆ ಎಂದರು.

ಏರ್ ಇಂಡಿಯಾ, ಎಲ್‌ಐಸಿ , ರೇಲ್ವೆ ಮೊದಲಾದ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಜನರ ತೆರಿಗೆ ಹಣದಲ್ಲಿ ಸ್ಥಾಪಿಸುವ ಉದ್ದಿಮಗಳಿಂದ ಜನರಿಗೆ ಉದ್ಯೋಗಾವಕಾಶ ನೀಡಿ, ದೇಶದ ಪ್ರಗತಿಗೆ ದಾರಿಮಾಡಿಕೊಳ್ಳಬಹುದು. ಅದು ಬಿಟ್ಟು ಬಂಡವಾಳಶಾಹಿಗೆ ಒಪ್ಪಿಸುವ ಕ್ರಮದಿಂದ ದೇಶ ದಿವಾಳಿಯಾಗಲಿದೆ ಎಂದರು.

ನಾವೇ ಕರ್ನಾಟಕ ಸಂಘಟನೆ ಸದಸ್ಯ ಪಾರ್ವತೀಶ್ ಬಿಳಿದಾಳೆ ಮಾತನಾಡಿ, ಕನ್ನಡತನದ ಆಸ್ಮತೆಯ ಬಗ್ಗೆ ಕನ್ನಡಿಗರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಇಂದು ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಹದಗೆಡಲು ಕಾರಣವಾಗಿದೆ. ಆಷಾಢ ಮಾಸ, ಶ್ರಾವಣ ಮಾಸದಂತೆ ಇಂದು ನವೆಂಬರ್ ಮಾಸವಾಗಿದೆ. ಕನ್ನಡ ಚಳವಳಿ ಬಗ್ಗೆ ವಿಷಯ ಮಂಡಿಸಿ, ದಕ್ಷಿಣದ ರಾಜ್ಯಗಳಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಲ್ಲಿಕೆ ಯಾಗುತ್ತದೆ. ಆದರೆ ಕೇಂದ್ರದ ಬಜೆಟ್‌ನಲ್ಲಿ ನ್ಯಾಯಯುತವಾಗಿ ರಾಜ್ಯಗಳಿಗೆ ಅನುದಾನ ಹಂಚಿಕೆಯಾಗಿಲ್ಲ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸಮಾನಾಂತರವಾಗಿ ನ್ಯಾಯಸಲ್ಲಿಕೆಯಾಗುವಂತೆ ನಡೆದುಕೊಳ್ಳುತ್ತಿಲ್ಲ. ಕನ್ನಡ ಬಾವುಟ ಹಾರಿಸಲು ಬೇರೆಯವರ ಅನುಮತಿ ಪಡೆಯುವಂತಹ ಸ್ಥಿತಿ ಬಂದಿದೆ. ನೆರೆಯ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಗೆ ಮನ್ನಣೆ ನೀಡಲಾಗುತ್ತಿದೆ. ಶಿಕ್ಷಣ, ಉದ್ಯಮ, ಸಾರ್ವಜನಿಕವಾಗಿ ಭಾಷೆಗೆ ಆದ್ಯತೆ ನೀಡುತ್ತಿದ್ದು, ಇಲ್ಲಿಯೂ ಅದೇ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದರು.

ಪತ್ರಕರ್ತ ಮಂಜುನಾಥ ಅದ್ದೆ, ರೈತ ಹೋರಾಟಗಾರರಾದ ಸುಲೋಚನಮ್ಮ ವೆಂಕಟರೆಡ್ಡಿ ಮಾತನಾಡಿದರು.

ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net