

ಕಲಬುರಗಿ: ಸಾಹಿತ್ಯ ನಮ್ಮನ್ನು ಉತ್ಸಾಹಿಗಳಾಗಿ ಬದುಕಲು ಪ್ರೋತ್ಸಾಹಿಸುತ್ತದೆ. ಜೀವನ ಪ್ರೀತಿಯನ್ನು ಇಮ್ಮಡಿಗೊಳಿಸುತ್ತದೆ. ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ರಾಷ್ಟ್ರಕೂಟ ಪುಸ್ತಕ ಮನೆ, ಸೇಡಂ ಹಾಗೂ ಕವಿರಾಜಮಾರ್ಗ ಪ್ರಕಾಶನ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಿಪಾಲರೆಡ್ಡಿ ಮುನ್ನೂರ ಅವರ ನುಡಿ ಸಾರಥ್ಯದ ಬಿಸಿಲ ನಾಡಿನ ಬೆಳದಿಂಗಳು' ಹಾಗೂ ಎ.ಕೆ.ರಾಮೇಶ್ವರ ಬರೆದಕೆಂಪು ಗುಲಾಬಿಯ ಕಂಪು' ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಹಲವು ವರ್ಷದ ಹಿಂದೆ ರಾಮೇಶ್ವರ ಅವರು ವಚನಗಳ ಸಂಪುಟ ಉಡುಗೊರೆಯಾಗಿ ನೀಡಿದ್ದರು. ಅವರ ನೇರ ಮಾತು, ಕನ್ನಡದ ಕಾಳಜಿ, ಸರಳ, ಸೌಜನ್ಯ ಮೈಗೂಡಿಸಿಕೊಂಡಿದ್ದಾರೆ. ಹಿರಿಯ ಸಾಹಿತಿಗಳ ಸಂಭ್ರಮದಲ್ಲಿ ಪಾಲ್ಗೊಂಡಿರುವುದು, ಸಂತಸ ತಂದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಮಹತ್ವದ ಸೇವೆ ಸಲ್ಲಿಸಿ, ಎಲ್ಲ ಕಿರಿಯರಿಗೆ, ನವ ಸಾಹಿತಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಎ.ಕೆ.ರಾಮೇಶ್ವರ ಅವರ ಪ್ರತಿಷ್ಠಾನ ಸ್ಥಾಪನೆಗೆ ೧೦ ಲಕ್ಷ ರೂ. ನೀಡಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಕಲಬುರಗಿ ಸಾಹಿತ್ಯ ಲೋಕದ ಭೀಷ್ಮ ರಾಮೇಶ್ವರ ಅವರು ಮಕ್ಕಳ ಸಾಹಿತ್ಯದಲ್ಲಿ ಅಮೋಘ ಸಾಧನೆಗೈದಿದ್ದಾರೆ. ಅವರ ಸಾಹಿತ್ಯ, ಜೀವನಗಾಥೆ ಗುರುತಿಸಿ ಗೌರವಿಸಿದ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಹಾಗೂ ಅವರ ಇಡೀ ಬಳಗಕ್ಕೆ ಅಭಿನಂದನೆ ಸಲ್ಲಿಸುವೆ ಎಂದರು.
ಕೃತಿ ಕುರಿತು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ವಿಕ್ರಮ ವಿಸಾಜಿ ಮಾತನಾಡಿದರು. ಶಾಸಕ ಅಲ್ಲಮ ಪ್ರಭು ಪಾಟೀಲ್ ಇತರರಿದ್ದರು. ಸಿ.ಎಸ್.ಮಾಲಿಪಾಟೀಲ್ ನಿರೂಪಣೆ ಮಾಡಿದರು.