

ಬೆಂಗಳೂರು: ನದಿ ಇಲ್ಲದ ಪಟ್ಟಣದಲ್ಲಿ ಸುಸಜ್ಜಿತ ಹಾಗೂ ಸುವ್ಯವಸ್ಥಿತ ಬೆಂಗಳೂರು ನಗರವಾಗಿ ನಿರ್ಮಿಸಿರುವುದು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಪ್ರತೀಕವಾಗಿದೆ ಎಂದು ಸಂಸದ ಡಾ. ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಯಲಹಂಕದ ರೈಲು ಗಾಲಿ ಕಾರ್ಖಾನೆಯ ‘ನಾಡಪ್ರಭು ಕೆಂಪೇಗೌಡ ಸಂಘ’ ಭಾನುವಾರ ಆಯೋಜಿಸಿದ್ದ ಕೆಂಪೇಗೌಡರ 515ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಗರದಾದ್ಯಂತ ನೂರಾರು ಕೆರೆಗಳನ್ನು ನಿರ್ಮಿಸಿದ್ದ ಕೆಂಪೇಗೌಡರ ಪರಿಶ್ರಮ ನಿಜಕ್ಕೂ ಪ್ರಶಂಸನೀಯ. ಕುಲಕಸುಬುಗಳನ್ನು ಆಧರಿಸಿ ಪ್ರತಿ ಸಮುದಾಯಗಳಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸುವ ಮೂಲಕ ಕೆಂಪೇಗೌಡರು 500 ವರ್ಷಗಳ ಹಿಂದೆಯೇ ಜಾತ್ಯತೀತತೆಯನ್ನು ಅನುಸರಿಸಿದ್ದರು. ಧಾರ್ಮಿಕವಾಗಿಯೂ ಬೆಂಗಳೂರು ನಗರಕ್ಕೆ ಕೆಂಪೇಗೌಡರ ಕೊಡುಗೆ ಅಪಾರವಾಗಿದ್ದು ಗವಿಗಂಗಾಧರೇಶ್ವರ ದೇವಾಲಯ, ಕಾಡುಮಲ್ಲೇಶ್ವರ ದೇವಾಲಯ, ಹಲಸೂರಿನ ಸೋಮೇಶ್ವರ ದೇಗುಲ ಇಂದಿಗೂ ನಾಡಪ್ರಭುಗಳ ಕೊಡುಗೆಗೆ ಸಾಕ್ಷಿಯಾಗಿದೆ ಎಂದರು.
ನಗರವಾಸಿಗಳೆಲ್ಲರೂ ಕೆಂಪೇಗೌಡರನ್ನು ಸ್ಮರಿಸಲಿ:
ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಕೆಂಪೇಗೌಡರ ಮೂಲಸ್ಥಾನ ಯಲಹಂಕ, ಇಂದಿಗೂ ಅವರ ಕೊಡುಗೆಯ ಹಲವು ಕುರುಹುಗಳು ಇಲ್ಲಿವೆ. ಬಾಲ್ಯದಲ್ಲಿ ತಂದೆಯೊಂದಿಗೆ ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿ ನೀಡಿದ ಕೆಂಪೇಗೌಡರು, ಅಲ್ಲಿನ ನಗರ ಯೋಜನೆಯನ್ನು ನೋಡಿ, ಅಂಥದ್ದೇ ಮಾದರಿಯ ನಗರವನ್ನು ನಿರ್ಮಿಸಬೇಕೆಂಬ ಹಂಬಲದಿಂದ ಬೆಂಗಳೂರನ್ನು ನಿರ್ಮಿಸಿದರು. ಇಂದಿಗೂ ಅವರು ಕಟ್ಟಿರುವ ಅಕ್ಕಿಪೇಟೆ, ಬಳೇಪೇಟೆ, ಚಿಕ್ಕಪೇಟೆ, ತರಗುಪೇಟೆ ಮುಂತಾದ ಪೇಟೆಗಳು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಇರುವ ಸಾಕ್ಷಿಗಳಾಗಿವೆ. ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದ ಮಹಾನ್ ಪುರುಷ ಆಗಿದ್ದು, ನಗರದಲ್ಲಿ ವಾಸಿಸುವ ಪ್ರತಿಯೊಬ್ಬರೂ ನಾಡಪ್ರಭುವನ್ನು ಸ್ಮರಿಸಬೇಕು ಎಂದು ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಇದೇ ವೇಳೆ ಎಸ್‌ಎಸ್‌ಎಲ್ಸಿ, ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ರೈಲು ಗಾಲಿ ಕಾರ್ಖಾನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಉದ್ಯೋಗಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೈಲು ಗಾಲಿ ಕಾರ್ಖಾನೆಯ ನಾಡಪ್ರಭು ಕೆಂಪೇಗೌಡ ಸಂಘದ ಗೌರವಾಧ್ಯಕ್ಷ ಜಿ.ಎ.ವಿಜಯಕುಮಾರ್, ಅಧ್ಯಕ್ಷ ರಂಗನಾಥ್, ಪದಾಧಿಕಾರಿಗಳಾದ ಪ್ರಕಾಶ್, ಕೆ.ಟಿ.ಹರೀಶ್, ಮಂಜುನಾಥ್ ಕೆ.ಎಸ್, ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ರಾಜಾನುಕುಂಟೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ವೀರಣ್ಣ, ಸ್ಥಳೀಯ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್, ಎಚ್.ಸಿ. ರಾಜೇಶ್, ಎಸ್.ಆರ್.ಜನಾರ್ದನ್ ಸೇರಿ ಇನ್ನಿತರರು ಹಾಜರಿದ್ದರು.