

ಶಿವಮೊಗ್ಗ: ಕೆಂಪೇಗೌಡ ನಮ್ಮ ರಾಜ್ಯಕ್ಕೆ ಧರ್ಮಪ್ರಭುಗಳು ಮತ್ತು ನಾಡಪ್ರಭುಗಳು. ಬೆಂಗಳೂರನ್ನು ಕಟ್ಟಿ, ತಮ್ಮ ಸಮರ್ಥ ಆಡಳಿತದಿಂದ ರಾಷ್ಟ್ರವ್ಯಾಪಿ ಕೀರ್ತಿ ಗಳಿಸಿದ್ದರು ಎಂದು ತೀರ್ಥಹಳ್ಳಿ ತುಂಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ತಿಮ್ಮಯ್ಯ ನಾಯ್ಡು ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ದೇಶದ ಇತಿಹಾಸದಲ್ಲಿ ಸಾವಿರಾರು ರಾಜ, ಮಹಾರಾಜರು ಬಂದು ಹೋಗಿದ್ದಾರೆ. ಆದರೆ ಇತಿಹಾಸ ನಿರ್ಮಿಸಿ ಶಾಶ್ವತವಾಗಿ ಜನಮನದಲ್ಲಿ ಉಳಿದವರು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಕೆಂಪೇಗೌಡರೂ ಒಬ್ಬರು ಎಂದ ಅಭಿಪ್ರಾಯಪಟ್ಟರು.
ಕೆಂಪೇಗೌಡ ದೊಡ್ಡ ಸಾಮ್ರಾಟರಾಗಿರಲಿಲ್ಲ, ವಿಜಯನಗರ ಸಾಮ್ರಾಜ್ಯದ ಓರ್ವ ಸಾಮಂತ ರಾಜ. ಆದರೆ ಇವರ ಆಡಳಿತ, ಶೌರ್ಯ ಮತ್ತು ಧೈರ್ಯವನ್ನು ಹಲವು ಸಾಮ್ರಾಟರು ಮೆಚ್ಚಿದ್ದರು. ಅವರ ಆಡಳಿತ ಶೈಲಿಯನ್ನು ತಮ್ಮ ಸಾಮ್ರಾಜ್ಯದಲ್ಲಿ ಮಾದರಿಯಾಗಿ ಅಳವಡಿಸಿಕೊಂಡಿದ್ದರು. ರಾಜ್ಯದಲ್ಲಿ ಬರಗಾಲ ಬಂದಾಗ ಜನ ಸಾಮಾನ್ಯರಿಗೆ ದವಸ ಧಾನ್ಯಗಳ ವಿತರಣೆ ಹಾಗೂ ಕೃಷಿಗೆ ನೀರಿನ ಕೊರತೆಯಾಗದಂತೆ ಬೆಂಗಳೂರಿನ ಸುತ್ತಮುತ್ತಲೂ ನಿರ್ಮಿಸಿದ ನೂರಾರು ಕೆರೆಗಳು ಅವರ ಹೆಸರನ್ನು ಚಿರಸ್ಥಾಯಿಯಾಗಿಸಿದೆ ಎಂದರು.
ಶಿವಗಂಗೆಯ ಗಂಗಾಧರೇಶ್ವರ ದೇವಸ್ಥಾನದಲ್ಲಿ ಕೆಂಪೇಗೌಡರ ಲೋಹದ ಪ್ರತಿಮೆ ನಿರ್ಮಿಸಲಾಗಿದೆ. ಇಡೀ ದೇಶದಲ್ಲಿ ಕೃಷ್ಣದೇವರಾಯ, ಶಿವಪ್ಪನಾಯಕ ಮತ್ತು ಕೆಂಪೇಗೌಡರ ಪ್ರತಿಮೆ ಮಾತ್ರ ಲೋಹದಿಂದ ನಿರ್ಮಾಣಗೊಂಡಿದೆ ಎಂದು ಹೇಳಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಆದಿಮೂರ್ತಿ ಇತರರಿದ್ದರು.
ನೂತನ ವಿಧಾನ ಪರಿಷತ್ ಸದಸ್ಯರು, ನಿಗಮ-ಮಂಡಳಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಎಂಆರ್‌ಎಸ್ ವೃತ್ತದಿಂದ ಆದಿಚುಂಚನಗಿರಿ ಸಮುದಾಯ ಭವನದವರೆಗೆ ಕೆಂಪೇಗೌಡ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.