ಹನೂರಲ್ಲಿ ವಿಜೃಂಭಣೆಯ ಕೆಂಪೇಗೌಡರ ಜಯಂತಿ

ಹನೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಮೆರವಣಿಗೆಗೆ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು. ಎಂ.ಆರ್ ಮಂಜುನಾಥ್, ಆರ್.ನರೇಂದ್ರ, ಪರಿಮಳ ನಾಗಪ್ಪ, ಡಾ.ಎಸ್ ದತ್ತೇಶ್‌ಕುಮಾರ್ ಇತರರು ಇದ್ದರು.
ಹನೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಮೆರವಣಿಗೆಗೆ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಚಾಲನೆ ನೀಡಿದರು. ಎಂ.ಆರ್ ಮಂಜುನಾಥ್, ಆರ್.ನರೇಂದ್ರ, ಪರಿಮಳ ನಾಗಪ್ಪ, ಡಾ.ಎಸ್ ದತ್ತೇಶ್‌ಕುಮಾರ್ ಇತರರು ಇದ್ದರು.
Published on

ಹನೂರು: ಎಲ್ಲರ ಗಮನ ಸೆಳೆದ ಕೇರಳದ ಪ್ರಸಿದ್ಧ ಚಂಡಿ ವಾದ್ಯ ಕುಣಿತ… ಮುದ ನೀಡಿದ ವಿವಿಧ ಕಲಾ ತಂಡಗಳ ನೃತ್ಯ… ಮೊಳಗಿದ ಜಯಘೋಷ….ಎಲ್ಲರ ಹೆಗಲಲ್ಲೂ ರಾರಾಜಿಸಿದ ಕನ್ನಡ ಬಾವುಟ… ಡಿಜೆ ಸಾಂಗ್ಸ್‌ಗೆ ಜೋಶ್‌ನಿಂದ ಕುಣಿದು ಕುಪ್ಪಳಿದ ಯುವ ಸಮೂಹ…

ಇದು ಹನೂರು ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಪ್ರಯುಕ್ತ ಗುರುವಾರ ತುಂತುರು ಮಳೆಯ ನಡುವೆಯೂ ವಿಜೃಂಭಣೆಯಿಂದ ನಡೆದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ.

ವಿಜೃಂಭಣೆಯ ಮೆರವಣಿಗೆ: ಪಟ್ಟಣದ ನಾಡಪ್ರಭು ಕೆಂಪೇಗೌಡ ವೃತ್ತದ ಬಳಿ ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಶಾಸಕರಾದ ಆರ್.ನರೇಂದ್ರ, ಪರಿಮಳಾ ನಾಗಪ್ಪ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್ ದತ್ತೇಶ್‌ಕುಮಾರ್ ಹಾಗೂ ಇತರ ಗಣ್ಯರು ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಬಳಿಕ ವೃತ್ತದಲ್ಲಿನ ಭಾವಚಿತ್ರಕ್ಕೂ ಪುಷ್ಪಾರ್ಚನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇಲ್ಲಿಂದ ಹೊರಟ ಮೆರವಣಿಗೆ ಮ.ಬೆಟ್ಟದ ರಸ್ತೆ, ಬಂಡಳ್ಳಿ ರಸ್ತೆ ಮೂಲಕ ತೆರಳಿ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲ ಆವರಣ ತಲುಪಿತು. ಮೆರವಣಿಯಲ್ಲಿ ಕೇರಳದ ಚಂಡಿ ಕುಣಿತ ಎಲ್ಲರ ಗಮನ ಸೆಳೆಯಿತು. ಇನ್ನು ಕೀಲು ಕುದುರೆ, ಗಾರುಡಿಗ ಗೊಂಬೆ ಹಾಗೂ ಇತರ ಗೊಂಬೆಗಳ ನೃತ್ಯ ಮೆರವಣಿಗೆಗೆ ಮೆರುಗು ತಂದಿತು. ಹಳ್ಳಿಕಾರ್ ತಳಿಯ ಹಸುಗಳು ಭಾಗಿಯಾಗಿದ್ದವು. ಮಳವಳ್ಳಿ ಕೋಲಾಟ ತಂಡ ಸದಸ್ಯರು ಬೆಂಕಿಯಲ್ಲಿ ವಿಸ್ಮಯ ಮೂಡಿಸಿದರು. ಇತ್ತ ದಾರಿಯುದ್ದಕ್ಕೂ ಎಡಬಿಡದೆ ಸುರಿಯುತ್ತಿದ್ದ ತುಂತುರು ಮಳೆಯ ನಡುವೆಯೂ ಯುವಕರು ಕುಣಿದು ಕುಪ್ಪಳಿಸಿದರು. ಕೆಂಪೇಗೌಡರ ಕುರಿತ ಜಯಘೋಷ ಮುಗಿಲು ಮುಟ್ಟಿತ್ತು.

ಮಳೆಯ ನಡುವೆಯೂ ಭಾಗಿಯಾದ ಶಾಸಕ: ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಮಳೆ ಸುರಿಯಲಾರಂಭಿಸಿತು. ಆದಾಗ್ಯೂ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇತ್ತ ಶಾಸಕ ಎಂ.ಆರ್. ಮಂಜುನಾಥ್ ಅವರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಯ ಕುಶಲೋಪರಿ ವಿಚಾರಿಸಿದರು.

ಜಯಂತಿಗಳು ಭಾವಾನಾತ್ಮಕತೆಯ ಪ್ರತೀಕ: ಇದಕ್ಕೂ ಮುನ್ನಾ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಜಯಂತಿ ಆಚರಣೆಗಳು ಭಾವನಾತ್ಮಕತೆಯನ್ನು ಹೊಂದಿದೆ. ಪೂರ್ವಿಕರು ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಇದರಿಂದ ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ. ಈ ದಿಸೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿರುವುದು ಮೆಚ್ಚುಗೆಯ ಸಂಗತಿ ಎಂದರು.

ಕೆಂಪೇಗೌಡರು ದೂರದೃಷ್ಟಿ ಹೊಂದಿದ್ದು, ಎಲ್ಲ ವರ್ಗಕ್ಕೂ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಂದಿನ ಕಾಲ ಘಟ್ಟದಲ್ಲೇ 4 ದ್ವಾರಗಳನ್ನು ಗುರುತಿಸಿ ಬೆಂಗಳೂರನ್ನು ನಿರ್ಮಿಸಿದರು. ಇಂದು ವಿಶ್ವ ಮಟ್ಟದಲ್ಲಿ ಸಿಲಿಕಾನ್ ಸಿಟಿ ಎಂಬ ಖ್ಯಾತಿ ಗಳಿಸಿದ್ದು, ಉತ್ತಮ ಸಮಾಜಕ್ಕೆ ಇಂದಿಗೂ ದಾರಿದೀಪವಾಗಿದ್ದಾರೆ. ಜೀವನ ಅಮೂಲ್ಯ. ಹಾಗಾಗಿ ಪ್ರೀತಿ, ವಿಶ್ವಾಸದಿಂದ ನಗುತ್ತಾ ಬಾಳಿದರೆ ಸ್ವರ್ಗ ಲಭಿಸುತ್ತದೆ. ದ್ವೇಷದಿಂದ ಕೂಡಿದ್ದರೆ ಬದುಕು ನರಕವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು. ಹಾಗೆಯೇ ಮಕ್ಕಳಲ್ಲಿ ನೈತಿಕತೆ ಬೆಳೆಸಬೇಕು ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ನಟರಾಜು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ ಗಂಗಾಧರ್, ನಿರ್ದೇಶಕ ಮಂಜೇಗೌಡ, ಚಾ.ನಗರ ಹಾಗೂ ಮೈಸೂರು ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ತಾಲೂಕು ವಿಶ್ವ ಮಾನವ ಒಕ್ಕಲಿಗರ ಸಂಘದ ಅಧ್ಯಕ್ಷ ಲಿಂಗರಾಜು, ಪಪಂ ಸದಸ್ಯರಾದ ಹರೀಶ್‌ಕುಮಾರ್, ಗಿರೀಶ್, ಆನಂದ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ತಾಪಂ ಇಒ ಉಮೇಶ್, ಯುವ ಮುಖಂಡ ನವನೀತ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net