ಕೆಂಪೇಗೌಡರ ಆಡಳಿತ ವೈಖರಿ ನಮಗೆಲ್ಲಾ ಸ್ಪೂರ್ತಿ: ಸಿಎಂ ಸಿದ್ದರಾಮಯ್ಯ ಬಣ್ಣನೆ

kempe
Published on

ಬೆಂಗಳೂರು:‘ನಾಡಪ್ರಭು ಕೆಂಪೇಗೌಡರು’ 500 ವರ್ಷದ ಹಿಂದೆಯೇ ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಕುರಿತು ದೂರದೃಷ್ಟಿ ಹೊಂದಿದ್ದ ಮುತ್ಸದ್ದಿ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಿಬಿಎಂಪಿ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಸುಮನಹಳ್ಳಿ ವೃತ್ತದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ನಾಡಪ್ರಭು ಕೆಂಪೇಗೌಡರ’ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆಂಪೇಗೌಡರ ಆಡಳಿತ ಜನಪರವಾಗಿತ್ತು. ಅವರ ಆಡಳಿತ ಕಾರ್ಯ ವೈಖರಿ ನಮ್ಮೆಲ್ಲರಿಗೂ ಸ್ಪೂರ್ತಿ. ಹಂಪಿ ಬಹಳ ಪ್ರವರ್ಧಮಾನಕ್ಕೆ ಬಂದಿದ್ದ ಕಾಲದಲ್ಲಿ ಪ್ರೇರಣೆ ಪಡೆದು ಬೆಂಗಳೂರನ್ನು ಅಭಿವೃದ್ಧಿಪಡಿಸುವ ಉದ್ದೇಶ ಅವರಿಗಿತ್ತು. ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ನವೋದ್ಯಮ ರಾಜಧಾನಿ, ಶೈಕ್ಷಣಿಕ ಹಾಗೂ ಆರೋಗ್ಯ ಕೇಂದ್ರವಾಗಿದ್ದಕ್ಕೆ ಅವರು ಕಾರಣ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರ ಖ್ಯಾತಿಗೆ ಕೆಂಪೇಗೌಡರೇ ಮೂಲ ಕಾರಣ. ಎಲ್ಲ ಜನರನ್ನೊಳಗೊಂಡ ಅಭಿವೃದ್ಧಿಗೊಳಿಸುವ, ಎಲ್ಲ ಸಮುದಾಯಗಳಿಗೂ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಕೈಗೊಂಡಿದ್ದರು. ಇದು ನಮ್ಮ ಸಂವಿಧಾನದ ಆಶಯ. ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ, ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸಿಎಂ ಹೇಳಿದರು. 2017ರಲ್ಲಿ ನಮ್ಮ ಸರ್ಕಾರ ಪ್ರತಿ ವರ್ಷ ಜೂ.27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಿಸುವ ತೀರ್ಮಾನ ಕೈಗೊಂಡಿತ್ತು.ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡ ಸಮಾಧಿ ಅಭಿವೃದ್ಧಿ ಕಾರ್ಯ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟಿದ್ದು ನಮ್ಮ ಸರ್ಕಾರ ಎಂದರು.

ಬದುಕು ನಡೆಸಿ ವಿಶ್ವಮಾನರಾದರು....

ಕೆಂಪೇಗೌಡರ ಸಾಧನೆಗಳು ಶಾಶ್ವತ. ಒಕ್ಕಲಿಗರ ಜನಾಂಗದಲ್ಲಿ ಹುಟ್ಟಿದ್ದ ಅವರು ಬದುಕು ನಡೆಸಿ ಸಮಾಜಕ್ಕೆ ಸಂದೇಶ ನೀಡಿದ್ದು ವಿಶ್ವಮಾನವರಾಗಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ರಾಜಕೀಯದಲ್ಲಿ ಧರ್ಮ ಇರಬೇಕೆ ಹೊರತು, ಧರ್ಮದಲ್ಲಿ ರಾಜಕೀಯ ಇರಬಾರದು ಎನ್ನುವ ಮಾತನ್ನು ಮರೆಯಬಾರದು. ಅವರು ಎಲ್ಲ ಸಮುದಾಯಕ್ಕೆ ಸೇರಿದವರು. ಅವರು ನಾಡಿನ ಮತ್ತು ಎಲ್ಲ ಸಮಾಜದ ಆಸ್ತಿಯಾಗಿದ್ದಾರೆ. ನಾವು 3 ‘ಕೆ’ಗಳನ್ನು ಮರೆಯಬಾರದು. ಬೆಂಗಳೂರು ಕಟ್ಟಿದ ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಮತ್ತು ವಿಕಾಸಸೌಧ ಕಟ್ಟಿದ ಎಸ್ಸೆಂ ಕೃಷ್ಣ ಎಂದರು. ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಸಂಶೋಧನಾ ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. ಅವರ ಹೆಸರಿನಲ್ಲಿ ಭವ್ಯ ಕಟ್ಟಡ ನಿರ್ಮಾಣಕ್ಕೆ ಜಿಬಿಸಿಯಿಂದ 100 ಕೋಟಿ ರೂ.ಮೀಸಲಿಟ್ಟಿದ್ದೇವೆ. ಅದಕ್ಕೆ ಕಟ್ಟಡ ವಾಸ್ತುಶಿಲ್ಪಿಗಳು ವಿನ್ಯಾಸ ನೀಡಿದ್ದಾರೆ. ಈ ಬಗ್ಗೆ ನಿರ್ಮಲಾನಂದನಾಥ ಶ್ರೀಗಳ ಗಮನಕ್ಕೂ ತರಲಾಗುವುದು ಎಂದರು.

ಪ್ರಶಸ್ತಿ ಪ್ರದಾನ:

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ), ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೈಸೂರು ಸೋಪ್ಸ್ ಅಂಡ್ ಡಿಟಜೆಂಟ್ಸ್ ಸಂಸ್ಥೆಗೆ ಕೆಂಪೇಗೌಡ ಪ್ರಶಸ್ತಿ ನೀಡಲಾಯಿತು. ಸುಮನಹಳ್ಳಿ ವೃತ್ತ ಬಳಿ 5 ಎಕರೆಯಲ್ಲಿ ಕೆಂಪೇಗೌಡರ ಭವನ ನಿರ್ಮಾಣಕ್ಕೆ ಸಿಎಂ ಶಂಕು ಸ್ಥಾಪನೆ ನೆರವೇರಿಸಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿದರು. ಸಚಿವರಾದ ಎಚ್.ಸಿ.ಮಹದೇವಪ್ಪ, ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ, ಶಿವರಾಜ್ ತಂಗಡಗಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್, ಶಾಸಕರಾದ ಎಸ್.ಟಿ.ಸೋಮಶೇಖರ್, ಬಾಲಕೃಷ್ಣ, ಮುನಿರತ್ನ, ಶ್ರೀನಿವಾಸ್ ಮತ್ತಿತರರಿದ್ದರು.

ಸುಮನಹಳ್ಳಿ ವೃತ್ತದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದೇನೆ.ಅದಷ್ಟೂ ಬೇಗ ಕಟ್ಟಡ ನಿರ್ಮಾಣ ಮಾಡಿ ನಾನೇ ಉದ್ಘಾಟಿಸುತ್ತೇನೆ.

| ಸಿದ್ದರಾಮಯ್ಯ, ಸಿಎಂ.

ಕೆಂಪೇಗೌಡರು ಹಾಕಿಕೊಟ್ಟ ಸಂಪ್ರದಾಯ,ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ. ಅವರಲ್ಲಿದ್ದ ವಿಶ್ವ ಮಾನವ ಪ್ರಜ್ಞೆಯನ್ನೂ ನಾವೆಲ್ಲ ಬೆಳೆಸಿಕೊಳ್ಳಬೇಕು.

| ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಮೈಸೂರಿನ ಸುತ್ತೂರು ಮಠದ ಜಗದ್ಗುರು.

ಡಿಸಿಎಂ ಡಿಕೆಶಿ ನಾಡಿನ ಪ್ರಭುವಾಗಲಿ. ಅವರಿಗೆ ರಾಜ್ಯ ಮುನ್ನಡೆಸುವ ಶಕ್ತಿ ಸಿಗುವಂತಾಗಲಿ.

| ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಉತ್ತರಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net