

ಬೆಳಗಾವಿ: ಬೆಂಗಳೂರು ನಗರದ ಅಭಿವೃದ್ಧಿಗೆ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಸವರಾಜ ಹೆಗನಾಯಕ ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಂಪೇಗೌಡರು ಅನೇಕ ಸುಧಾರಣೆ ತರುವ ಮೂಲಕ ಬೆಂಗಳೂರನ್ನು ಮಹಾ ನಗರವೆಂದು ಪ್ರಖ್ಯಾತಿ ಪಡೆಯುವಂತೆ ಮಾಡಿದ್ದಾರೆ ಎಂದರು. ಉಪನ್ಯಾಸಕರಾಗಿ ಮಹೇಶ ಚನ್ನಂಗಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗ ಪ್ರಸಿದ್ಧ ಐಟಿ ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದಾಗಿ ಕರ್ನಾಟಕದ ಹೆಸರು ಜಗತ್ತಿನಲ್ಲಿ ಪಸರಿಸಿದೆ ಎಂದರು.
ನಾಡಪ್ರಭು ಕೆಂಪೆಗೌಡ ಜಯಂತಿ ಅಂಗವಾಗಿ ವಿವಿಧ ಶಾಲಾ ಕಾಲೇಜುಗಳಲ್ಲಿ ಜರುಗಿದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಅಪರ ಜಿಲ್ಲಾಧಿಕಾರಿ ವಿಜಯ ಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೈ.ಎಂ.ಪಾಟೀಲ, ಜಿಲ್ಲಾ ಉಪಯೋಜನಾ ಸಮನ್ವಯ ಅಧಿಕಾರಿ ಉಮಾದೇವಿ ಹಿರೇಮಠ, ಸಾಹಿತಿಗಳಾದ ಸಿದ್ಧರಾಮ ತಳವಾರ, ಜಾಗತಿಕ ಲಿಂಗಾಯತ ಮಹಾ ಸಭೆಯ ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಚೌಗಲಾ ಇತರರಿದ್ದರು.