ಜೂ.27ಕ್ಕೆ ಕೆಂಪೇಗೌಡರ 516ನೇ ಜಯಂತಿ: 7 ಸ್ಥಳಗಳಿಂದ ಹೊರಡಲಿದೆ ಪುರ ಜ್ಯೋತಿ

kempegowda
Published on

ಬೆಂಗಳೂರು: ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಶುಕ್ರವಾರ (ಜೂ.27) ರಾಜ್ಯಾದ್ಯಂತ ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೆಂಪೇಗೌಡ ಜಯಂತಿಯ ರಾಜ್ಯ ಮಟ್ಟದ ಪ್ರಧಾನ ಸಮಾರಂಭ ನಗರದ ಮಾಗಡಿ ರಸ್ತೆಯ ಸುಮನಹಳ್ಳಿ ಬಳಿ ಇರುವ ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ಅಂದು ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ ಕೆಂಪೇಗೌಡ ಭವನ ನಿರ್ಮಾಣದ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​, ಆದಿಚುಂಚನಗಿರಿ ಮಠಾಧೀಶ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಇತರ ಮಠಾಧೀಶರು ಹಾಗೂ ಗಣ್ಯರ ಸಮ್ಮುಖ ನೆರವೇರಲಿದೆ.

ಇದಕ್ಕೂ ಮುನ್ನ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಬೆಳಗ್ಗೆ 11 ಗಂಟೆ ಸುಮಾರಿಗೆ ನಾಡಿನ 7 ಸ್ಥಳಗಳಿಂದ ಪುರ ಜ್ಯೋತಿಯು ಮೆರವಣಿಗೆ ಮೂಲಕ ಆಗಮಿಸಲಿದೆ. ಜತೆಗೆ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಸಿಎಂ, ಡಿಸಿಎಂರಿಂದ ಪುಷ್ಪನಮನ:

ನಾಡಪ್ರಭುಗಳ ಜಯಂತಿ ಹಿನ್ನೆಲೆಯಲ್ಲಿ 3 ಕಡೆ ಕೆಂಪೇಗೌಡರ ಪ್ರತಿಮೆಗಳಿಗೆ ಸಿಎಂ, ಡಿಸಿಎಂ ಹಾಗೂ ಸಚಿವರು ಪುಷ್ಪನಮನ ಸಲ್ಲಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಕೆಐಎ ಏರ್‌ಪೋರ್ಟ್ ಆವರಣದಲ್ಲಿರುವ ಕೆಂಪೇಗೌಡರ ಪ್ರಗತಿಯ ಪ್ರತಿಮೆಗೆ, 10.30ಕ್ಕೆ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದಲ್ಲಿರುವ ಕೆಂಪೇಗೌಡ ಮತ್ತು ಕೇಂದ್ರ ಕಚೇರಿ ಆವರಣದಲ್ಲಿರುವ ಮಹಾತ್ಯಾಗಿ ಲಕ್ಷ್ಮಿದೇವಿ ಪ್ರತಿಮೆ ಹಾಗೂ 10.45ಕ್ಕೆ ವಿಧಾನಸೌಧ ಮುಂಭಾಗದಲ್ಲಿರುವ ಅಶ್ವಾರೂಢ ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಗುತ್ತದೆ.

ಪಾಲಿಕೆ ಕಚೇರಿ ಆವರಣದಲ್ಲಿ ಕಾರ್ಯಕ್ರಮ:

ಬಿಬಿಎಂಪಿ ಮಟ್ಟದ ಕೆಂಪೇಗೌಡ ಜಯಂತಿಯು ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್​​ಕುಮಾರ್ ಗಾಜಿನ ಮನೆಯಲ್ಲಿ ನಿಗದಿಯಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮವು ಸಂಜೆ 4.30ರಿಂದ 6ರ ವರೆಗೆ ನಡೆಯಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಹಾಗೂ ಉತ್ತಮ ಅಧಿಕಾರಿ ನೌಕಕರಿಗೆ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಪಾಲಿಕೆಯ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ತಿಳಿಸಿದ್ದಾರೆ.

7 ಸ್ಥಳಗಳಿಂದ ಪುರ ಜ್ಯೋತಿ:

ಕೆಂಪೇಗೌಡ ಜಯಂತಿ ದಿನದಂದು ಬೆಳಗ್ಗೆ 7 ಗಂಟೆಗೆ ನಗರದ ನಾಲ್ಕು ದಿಕ್ಕುಗಳಲ್ಲಿರುವ (ಲಾಲ್ ಬಾಗ್, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು ಕೆರೆ) ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ತಾಲ್ಲೂಕಿನ ಕೆಂಪಾಪುರ, ದೇವನಹಳ್ಳಿ ತಾಲ್ಲೂಕಿನ ಆವತಿ ಹಾಗೂ ಕುಣಿಗಲ್ ತಾಲೂಕಿನ ಹುತ್ತರಿದುರ್ಗ ಸೇರಿ ಒಟ್ಟು 7 ಸ್ಥಳಗಳಿಂದ ಸಚಿವರ ನೇತೃತ್ವದಲ್ಲಿ ‘ಪುರ ಜ್ಯೋತಿ’ಗಳು ಹೊರಡಲಿವೆ. ಇವುಗಳನ್ನು ಪ್ರಧಾನ ಸಮಾರಂಭ ನಡೆಯುವ ಸ್ಥಳದಲ್ಲಿ ಗಣ್ಯರು ಸ್ವೀಕರಿಸಲಿದ್ದಾರೆ.

ಸಚಿವರಿಂದ ಪುರಜ್ಯೋತಿಗಳಿಗೆ ಚಾಲನೆ:

1. ಲಾಲ್​​ಬಾಗ್ ಗಡಿ ಗೋಪುರ: ಸಚಿವ ದಿನೇಶ್ ಗುಂಡೂರಾವ್. ಉಪಸ್ಥಿತಿ- ಶಾಸಕ ಉದಯ್ ಗರುಡಾಚಾರ್.

2. ಮೇಕ್ರಿ ವೃತ್ತ ಗಡಿ ಗೋಪುರ: ಸಚಿವ ಬೈರತಿ ಸುರೇಶ್. ಉಪಸ್ಥಿತಿ- ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ.

3. ಕೆಂಪಾಂಬುದಿ ಕೆರೆ ಗಡಿ ಗೋಪುರ: ಸಚಿವ ಜಮೀರ್ ಅಹ್ಮದ್. ಉಪಸ್ಥಿತಿ- ಶಾಸಕ ರವಿ ಸುಬ್ರಮಣ್ಯ.

4. ಹಲಸೂರು ಗಡಿ ಗೋಪುರ: ಸಚಿವ ಕೆ.ಜೆ ಜಾರ್ಜ್. ಉಪಸ್ಥಿತಿ- ಶಾಸಕ ರಿಜ್ವಾನ್ ಹರ್ಷದ್.

5. ನಾಡಪ್ರಭು ಕೆಂಪೇಗೌಡರ ಸಮಾಧಿ, ಮಾಗಡಿ: ಸಚಿವ ರಾಮಲಿಂಗಾರೆಡ್ಡಿ, ಉಪಸ್ಥಿತಿ- ಶಾಸಕ ಬಾಲಕೃಷ್ಣ.

6. ಚೆನ್ನಕೇಶವ ದೇವಾಲಯ, ಆವತಿ: ಸಚಿವ ಕೆ.ಎಚ್. ಮುನಿಯಪ್ಪ.

7. ಬಯಲು ಬಿಸಿಲು ಬಸವಣ್ಣ, ಹುತ್ರಿದುರ್ಗ: ಡಾ. ಜಿ.ಪರಮೇಶ್ವರ, ಉಪಸ್ಥಿತಿ- ಶಾಸಕ ಡಾ. ಎಚ್.ಡಿ. ರಂಗನಾಥ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net