ಸೆ.15ರಂದು ಕೆಂಪೇಗೌಡ ಪುತ್ಥಳಿ ಅನಾವರಣ: ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾಹಿತಿ

Kempegowda Youth Association press conference Mandya
Published on

ಮಂಡ್ಯ: ಮಳವಳ್ಳಿ ತಾಲೂಕು ಹಿಟ್ಟನಹಳ್ಳಿಕೊಪ್ಪಲಿನ ವಿಶ್ವೇಶ್ವರಯ್ಯ ವೃತ್ತದಲ್ಲಿ ಸೆ.15ರಂದು ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಹಾಗೂ ಕೆಂಪೇಗೌಡ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಹೇಳಿದರು.

ಕೆಂಪೇಗೌಡ ಯುವಕರ ಸಂಘ ಹಿಟ್ಟನಹಳ್ಳಿಕೊಪ್ಪಲು ವತಿಯಿಂದ ಅಂದು ಬೆಳಗ್ಗೆ 11.30ಕ್ಕೆ ಆಯೋಜಿಸಿರುವ ಸಮಾರಂಭದ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥಸ್ವಾಮೀಜಿ ವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥ್‌ನಾರಾಯಣ ಪುಷ್ಪಾರ್ಚನೆ ಸಲ್ಲಿಸಲಿದ್ದು, ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಶ್ರೀಗಳನ್ನು ಸನ್ಮಾನಿಸಲಿದ್ದಾರೆ. ಕೆಂಪೇಗೌಡರ ಕುರಿತು ಭಾರತ ಜ್ಞಾನಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ.ಚಿಕ್ಕರಂಗೇಗೌಡ ತಲಕಾಡು ಪ್ರಧಾನ ಭಾಷಣ ಮಾಡಲಿದ್ದಾರೆ. ಮಂಟಪದ ದಾನಿ ಮಂಗಳ ಗೌರಮ್ಮ ಕರಿಯಪ್ಪ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಗ್ರಾಮದ ವಿವೇಕಾನಂದ ಪ್ರೌಢಶಾಲೆ ಮುಂಭಾಗದಿಂದ ವಿಶ್ವೇಶ್ವರಯ್ಯ ವೃತ್ತದವರೆಗೆ ವಿವಿಧ ಕಲಾ ತಂಡದೊಂದಿಗೆ ಮೆರವಣಿಗೆ ಹಾಗೂ ಗಾಯಕ ಶಿವಾರ ಉಮೇಶ್ ಅವರಿಂದ ಗೀತಗಾಯನ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸಂಘದ ಸ್ವಾಮಿಗೌಡ, ಸ್ವಾಮಿ, ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net