ಕೆಂಪೇಗೌಡರು ದೂರದೃಷ್ಟಿಯ ನಾಡಪ್ರಭು

ಕೆಂಪೇಗೌಡರು ದೂರದೃಷ್ಟಿಯ ನಾಡಪ್ರಭು
Published on

ಶ್ರೀರಂಗಪಟ್ಟಣ: ದೂರದೃಷ್ಟಿ ಮತ್ತು ನವನವೀನ ಅಭಿವೃದ್ಧಿ ಚಿಂತನೆಯ ನಾಯಕ ನಾಡ ಪ್ರಭು ಕೆಂಪೇಗೌಡರು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಮಲ್ಟಿಪಲ್ ಕೌನ್ಸಿಲ್ ಛೇರ್ಮನ್ ಹಾಗೂ ಮಾಜಿ ಪ್ರಾಂತಪಾಲ ಅಲಯನ್ಸ್ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ತಾಲೂಕಿನ ಕೊಡಿಯಾಲ ಗ್ರಾಮದ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಹಾಗೂ ಸನ್ಮತಿ ಆಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜಯನಗರ ಸಾಮ್ರಾಜ್ಯದ ಆಡಳಿತ ವೈಖರಿ- ವೈಭವವನ್ನು ಸ್ವತಃ ಕಂಡಿದ್ದ ಕೆಂಪೇಗೌಡರು, ಸಮ ಸಮಾಜದ ನಿರ್ಮಾಣದ ದೂರ ದೃಷ್ಟಿಯಿಂದ ವ್ಯವಸ್ಥಿತವಾಗಿ, ಸರ್ವ ಸನ್ನದ್ಧವಾಗಿ ನಿರ್ಮಿಸಿದ ನಗರ ಬೆಂಗಳೂರು. ಪ್ರಸ್ತುತ ಬೃಹದಾಕಾರವಾಗಿ ಬೆಳೆದು ನಿಂತಿದೆ. ಕೆಂಪೇಗೌಡರು ಅತ್ಯುತ್ತಮ ಆಡಳಿತಗಾರರಾಗಿದ್ದರೂ ವಿಜಯನಗರ ದೊರೆಗಳಿಗೆ ನಿಷ್ಠೆ, ವಿಶ್ವಾಸ ಹೊಂದಿದ್ದು, ವಿಜಯನಗರ ಸಾಮ್ರಾಜ್ಯದ ಅಭಿವೃದ್ಧಿ ಮತ್ತು ರಕ್ಷಣೆಗೆ ಸದಾ ಬದ್ಧರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿ. ಧನಂಜಯ ದರಸಗುಪ್ಪೆ ಮಾತನಾಡಿ, ಕೆಂಪೇಗೌಡರು ಕೋಟೆ-ಪೇಟೆ-ಗುಡಿ -ಕೆರೆ -ಉದ್ಯಾನವನಗಳ ಪರಿಕಲ್ಪನೆಯಲ್ಲಿ, ಬೆಂಗಳೂರು ಸುತ್ತ ಕೋಟೆ ಹಾಗೂ ಪ್ರವೇಶ ದ್ವಾರಗಳು, ಐವತ್ತನಾಲ್ಕು ಪೇಟೆಗಳು, 260ಕ್ಕೂ ಹೆಚ್ಚು ಕೆರೆ-ಕಟ್ಟೆ ಕಲ್ಯಾಣಿಗಳು, 100ಕ್ಕೂ ಹೆಚ್ಚು ಗುಡಿ ಗೋಪುರ ಹಲವು ಉದ್ಯಾನವನಗಳನ್ನು ನಿರ್ಮಿಸಿದ್ದಾರೆ. ಇದು ಅವರ ದೂರದೃಷ್ಟಿಗೆ ಸಾಕ್ಷಿ. ಇದೇ ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಗಳಿಸಿ, ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಬಿಟಿ ಹಬ್ ಆಗಿ ಬೃಹತ್ ಗ್ರೇಟರ್ ಬೆಂಗಳೂರು ಆಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆಗೈದರು. ಶಾಲೆಯ ವಿದ್ಯಾರ್ಥಿ ಶಿವು ನಾಡ ಪ್ರಭು ಕೆಂಪೇಗೌಡ ಅವರ ಕುರಿತು ಪ್ರಬಂಧ ಮಂಡಿಸಿದರು. ಅಲ್ಲದೆ ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಬಿ.ಟಿ.ನಾಗೇಶ್, ಮುಖ್ಯಶಿಕ್ಷಕ ತೀರ್ಥ ಲಿಂಗಪ್ಪ, ಸನ್ಮತಿ ಅಲಯನ್ಸ್ ಅಧ್ಯಕ್ಷೆ ಅ.ಸುಜಾತಾ, ಕಾರ್ಯದರ್ಶಿ ಅ.ಮಹಾಲಕ್ಷ್ಮೀ, ಝೆಡ್ ಸಿ ಅ.ಅನಿಲ್, ಡಿ.ಸಿ.ಅ.ಸೋಮಣ್ಣ, ಅ.ರಾಮಕೃಷ್ಣ, ಕೃಷಿಕ ಆಲಯನ್ಸ್.ಎಸ್. ಸಿ ಮಲ್ಲೇಶ್, ಎಸ್ ಡಿಎಂಸಿ ಉಪಾಧ್ಯಕ್ಷ ಕೆಂಪಾಲಿಂಗೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net