

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸೇರಿದ ಜಾಗದಲ್ಲಿರುವ ಸರ್ಕಾರಿ ಜಮೀನನ್ನು ಲೇಔಟ್ ನಿರ್ಮಾಣಕ್ಕೆ ಬಳಸಿಕೊಳ್ಳುವ ಸಂಬಂಧ ಜಂಟಿ ಸರ್ವೆ ಕೈಗೊಂಡು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಬಿಡಿಎ ಹಾಗೂ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಪರಸ್ಪರ ಒಪ್ಪಿಗೆ ಸೂಚಿಸಿವೆ.
ದಶಕದಿಂದ ಬಾಕಿ ಉಳಿದಿದ್ದ ಈ ಪ್ರಕರಣವನ್ನು ಬಗೆಹರಿಸಲು ಬಿಡಿಎ ಹಾಗೂ ಸರ್ಕಾರದ ಮಧ್ಯೆ ಪತ್ರ ವ್ಯವಹಾರ ನಡೆದಿದ್ದರೂ, ಈವರೆಗೂ ಇತ್ಯರ್ಥ ಕಂಡಿಲ್ಲ. ಸರ್ಕಾರಿ ಜಮೀನು ಹಸ್ತಾಂತರವಾಗದ ಹೊರತು ಬಡಾವಣೆಯ ಕೆಲವೆಡೆ ರಸ್ತೆ ಸೇರಿದಂತೆ ಇತರ ಮೂಲಸೌಕರ್ಯ ಒದಗಿಸಲು ಅಡ್ಡಿಯಾಗಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆ ಮೂಲಕ ಭೂಮಾಪನ ಇಲಾಖೆ ಮಟ್ಟದಲ್ಲಿ ಹಿಂದೆಯೇ ಸಭೆ ನಡೆದಿದ್ದರೂ ಯಾವುದೇ ನಿರ್ಧಾರ ಆಗಿರಲಿಲ್ಲ. ಇದೀಗ ಗುರುವಾರ ನಡೆದ ಸಭೆಯಲ್ಲಿ ಜಂಟಿ ಸರ್ವೆ ಕೈಗೊಳ್ಳಲು ತೀರ್ಮಾನಿಸಿರುವುದು ಪ್ರಕರಣ ಸುಖ್ಯಾಂತಗೊಳ್ಳುವ ನಿರೀಕ್ಷೆ ಇದೆ.
ಬಿಡಿಎ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆ 4,043 ಎಕರೆ ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ 193 ಎಕರೆ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನು ಸೇರಿದ್ದು, ಹೆಚ್ಚಿನವು ಭೀಮನಕುಪ್ಪೆ, ಚಲ್ಲಘಟ್ಟ ಹಾಗೂ ರಾಮಸಂದ್ರ ಗ್ರಾಮಗಳ ವ್ಯಾಪ್ತಿಯಲ್ಲಿದೆ. ಬಡಾವಣೆ ನಿರ್ಮಾಣದ ೋಷಣೆ ವೇಳೆ ಈ ಜಮೀನು ಹಸ್ತಾಂತರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ನಿಯಮಾವಳಿ ಅಡ್ಡಿಯಾಗಿ ಹಸ್ತಾಂತರ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ಇತ್ತೀಚಿಗೆ ಬಡಾವಣೆಯ ಸೈಟ್ ಹಂಚಿಕೆದಾರರ ಎನ್‌ಪಿಕೆಎಲ್ ಮುಕ್ತ ವೇದಿಕೆಯು ಸರ್ವೆ ಇಲಾಖೆಗೆ ಅಹವಾಲು ಸಲ್ಲಿಸಿ ಪ್ರಕರಣ ಇತ್ಯರ್ಥಕ್ಕೆ ಮೊರೆ ಇಟ್ಟಿತ್ತು. ಇದನ್ನಾಧರಿಸಿ ಗುರುವಾರ ನಡೆದ ಸಭೆಯಲ್ಲಿ ಜಂಟಿ ಸರ್ವೆ ನಡೆಸುವ ತೀರ್ಮಾನ ಹೊರಬಿದ್ದಿದೆ.
ತಿಂಗಳಾಂತ್ಯಕ್ಕೆ ಸರ್ವೆ ಆರಂಭ:
ಕೆಂಪೇಗೌಡ ಬಡಾವಣೆ ರಚನೆಗೆ ಬೇಕಿರುವ ಸರ್ಕಾರಿ ಜಮೀನು ಹಸ್ತಾಂತರ ಸಂಬಂಧ ಬಿಡಿಎ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳ ಸಮಕ್ಷಮ ಜಂಟಿ ಸರ್ವೆ ನಡೆಯಲು ತೀರ್ಮಾನಿಸಲಾಗಿದೆ. ಲೇಔಟ್‌ನ ವಿವಿಧೆಡೆಯಿರುವ ಜಮೀನಿನ ನಿಖರ ಸರ್ವೆ ನಂಬರ್ ಹಾಗೂ ಗಡಿ ಗುರುತಿಸಿ ಸರ್ಕಾರದ ಅನುಮತಿಯೊಂದಿಗೆ ಹಸ್ತಾಂತರ ನಡೆಯಲಿದೆ. ಈ ಪ್ರಕ್ರಿಯೆಗೆ ಜಿಲ್ಲಾಡಳಿತದ ಸಹಕಾರ ಕೂಡ ಕೋರಲಾಗಿದೆ. ಈ ಜಮೀನಿನಲ್ಲಿ ಯಾವ ವ್ಯಕ್ತಿಗಳಿಗೂ ಸಾಗುವಳಿ ಚೀಟಿ ನೀಡದ ಕಾರಣ ಎಲ್ಲ 193 ಎಕರೆಯನ್ನು ಪಡೆಯುವ ನಿಟ್ಟಿನಲ್ಲಿ ಈ ತಿಂಗಳಾಂತ್ಯದೊಳಗೆ ಸರ್ವೆ ಕಾರ್ಯವನ್ನು ಆರಂಭಿಸಲಾಗುವುದು ಎಂದು ಬಿಡಿಎ ಭೂಸ್ವಾಧೀನ ವಿಭಾಗದ ಜಂಟಿ ಆಯುಕ್ತೆ ಡಾ. ಸೌಜನ್ಯ .ಎ ಅವರು ‘ವಿಜಯವಾಣಿ’ಗೆ ತಿಳಿಸಿದರು.