

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಈ ಬಾರಿಯೂ ಕೆಂಪೇಗೌಡ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಿದ್ದತೆ ನಡೆಸಲಿದ್ದು ಈ ಕುರಿತಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಜೂ. 27 ರಂದು ರಾಜ್ಯ ಮಟ್ಟದ ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ದೇವನಹಳ್ಳಿಯ ಆವತಿ ಗ್ರಾಮದಿಂದ ಜ್ಯೋತಿ ಹೊರಡಲಿದ್ದು ಜೂ. 30 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾಹಿತಿ ನೀಡಿದ್ದಾರೆ.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದರು. 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಬು ಜಗಜೀವನರಾಮ್ ಭವನದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದ್ದು ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಿಂದ ಅಂದು ಬೆಳಗ್ಗೆ 8:30 ಕ್ಕೆ ಕೆಂಪೇಗೌಡ ಜ್ಯೋತಿ ಹೊರಡಲಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಲ್ಲ ಪೂರ್ವ ಸಿದ್ದತೆ ಕೈಗೊಳ್ಳಬೇಕು. ಸರಿಯಾದ ಸಮಯಕ್ಕೆ ಜ್ಯೋತಿ ಹೊರಡಲು ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಡಳಿತಭವನದ ಸಭಾಂಗಣದಲ್ಲಿ ಆಯೋಜನೆ: ಜೂ. 27 ರಂದು ಕೆಂಪೇಗೌಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮ ಇರುವುದರಿಂದ, ಆ ದಿನ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಹೊರಡಬೇಕಿದೆ. ಹಾಗಾಗಿ ಜಿಲ್ಲಾ ಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಜೂ.30 ರಂದು ಆಚರಿಸಲು ನಿರ್ಧರಿಸಲಾಗಿದ್ದು, ಜಿಲ್ಲಾಡಳಿತದಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪುತ್ಥಳಿ, ವೇದಿಕೆ ಅಲಂಕಾರ ವ್ಯವಸ್ಥೆ, ಕುಡಿಯುವ ನೀರು, ಊಟೋಪಚಾರ ಸುವ್ಯವಸ್ಥಿತವಾಗಿ ಆಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸ್ಪರ್ಧೆ, ಸನ್ಮಾನ: ಶಾಲಾ ಕಾಲೇಜು ಮಕ್ಕಳಿಗೆ ಪ್ರಬಂಧ, ಚರ್ಚಾ ಸ್ಪರ್ಧೆ ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಹಾಗೆಯೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಅದಕ್ಕಾಗಿ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಪಟ್ಟಿ ತಯಾರಿಸಬೇಕು ಅವರಿಗೆ ಬೇಕಾದ ಪೂರ್ವ ಸಿದ್ದತೆಯನ್ನು ಆಯಾ ಶಾಲೆಗಳಲ್ಲಿ ನಡೆಸಬೇಕು ಎಂದು ಸೂಚಿಸಿದರು. ಜಿಲ್ಲಾ ಮಟ್ಟದ ಕಾರ್ಯಕ್ರಮ ದಿನದಂದು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಿಂದ ಕೆಂಪೇಗೌಡರ ಪಲ್ಲಕ್ಕಿ ಮೆರವಣಿಗೆ ಹೊರಡಲಿದ್ದು ಆಯಾ ತಾಲೂಕುಗಳ ಕಾರ್ಯನಿರ್ವಹಣಾಧಿಕಾರಿಗಳೂ ಹಾಗೂ ತಾಲೂಕಿನ ತಹಸೀಲ್ದಾರ್ ಅವರು ಅದಕ್ಕೆ ಬೇಕಾದ ಎಲ್ಲ ಬಗೆಯ ಅಗತ್ಯಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ: ಕೆಂಪೇಗೌಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮಕ್ಕೆ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿನ ವಿವಿಧ ಸಂಘ ಸಂಸ್ಥೆಗಳು, ಸ್ತ್ರೀ ಶಕ್ತಿ ಸಂಘಗಳು, ಜನಪ್ರತಿನಿಧಿಗಳು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.