

ಮಂಡ್ಯ: ಜಿಲ್ಲಾಡಳಿತದ ವತಿಯಿಂದ ಜೂ.27 ರಂದು ಅರ್ಥಯುತ ಹಾಗೂ ವೈಭವಯುತವಾಗಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ನಾಡಪ್ರಭು ಕೆಂಪೇಗೌಡರ ಅಲಂಕೃತ ಭಾವಚಿತ್ರದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮಹಾವೀರ ವೃತ್ತದ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ತಲುಪಲಿದೆ. ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರಗು ನೀಡಲಿದೆ ಎಂದರು.
ಬೆಳಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಶಿಷ್ಟಾಚಾರದಂತೆ ಗಣ್ಯರನ್ನು ಆಹ್ವಾನಿಸಲಾಗುವುದು. ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಪಾಂಡುಕುಮಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಂದಿನ ವೇದಿಕೆ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ನಾಡಪ್ರಭು ಕೆಂಪೇಗೌಡ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಅಭಿವೃದ್ಧಿಗಾಗಿ ದುಡಿದವರು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ 3 ರಿಂದ 4 ಅಭ್ಯರ್ಥಿಯನ್ನು ಗುರುತಿಸಿ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನಿಸಲು ವ್ಯವಸ್ಥೆ ಮಾಡಿಕೊಳ್ಳಿ. ಜಯಂತಿಯನ್ನು ಯಾವುದೇ ಲೋಪವಿಲ್ಲದೆ ಅಚ್ಚುಕಟ್ಟಾಗಿ ಆಚರಿಸಲು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನೊಳಗೊಂಡ ಸಮಿತಿ ರಚಿಸಿ ಜವಾಬ್ದಾರಿಗಳನ್ನು ವಹಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ನಗರಸಭೆ ಆಯುಕ್ತೆ ಪಂಪಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಸೇರಿದಂತೆ ವಿವಿಧ ಸಮುದಾಯ, ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.