ಬೆಂಗಳೂರು ಪ್ರಸಿದ್ಧಿಗೆ ಕೆಂಪೇಗೌಡರು ಕಾರಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Kempegowda Jayanti Mandya
Published on

ಮಂಡ್ಯ: ಕರ್ನಾಟಕದ ಅತಿ ಹೆಚ್ಚು ಜನಸಂದಣಿ ಹಾಗೂ ಅಭಿವೃದ್ಧಿ ಹೊಂದಿರುವ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ನಾಡಪ್ರಭು ಕೆಂಪೇಗೌಡ ಅವರು ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುಣ್ಯ ಪುರುಷರು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಜಯಂತಿ ಮೂಲಕ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗುತ್ತಿದೆ ಎಂದರು.

500 ವರ್ಷಗಳ ಹಿಂದೆಯೇ ಕೆಂಪೇಗೌಡರು ದೂರದೃಷ್ಟಿಯನ್ನು ಇಟ್ಟುಕೊಂಡು ಬೆಂಗಳೂರು ನಗರದಲ್ಲಿ ಕೆರೆಕಟ್ಟೆ, ದೇವಾಲಯ ನಿರ್ಮಿಸಿದ್ದರು. ಪ್ರಸ್ತುತ ಹಳೇ ಮೈಸೂರು ಭಾಗ ಮತ್ತು ಬೆಂಗಳೂರು ಅಭಿವೃದ್ಧಿ ಹೊಂದಲು ಮೂಲ ಕಾರಣ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ನಾಡಪ್ರಭು ಕೆಂಪೇಗೌಡರು. ಹಳೇ ಮೈಸೂರಿನ ಭಾಗಗಳಲ್ಲಿ ಶೈಕ್ಷಣಿಕ, ಆರೋಗ್ಯ, ಮೀಸಲಾತಿಯ ವಿಚಾರಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಕೃಷಿ ಸಮಗ್ರ ವಿಶ್ವವಿದ್ಯಾನಿಲಯವನ್ನು 100 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಂತೆಯೇ ಮೈಶುಗರ್ ಕಾರ್ಖಾನೆಗೆ 25 ಕೋಟಿ ರೂ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರವಿಕುಮಾರ್ ಗಣಿಗ, ಕೆಂಪೇಗೌಡ ಅವರು 500 ವರ್ಷದ ಹಿಂದೆಯೇ ಬೆಂಗಳೂರು ನಗರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬೆಂಗಳೂರು ನಿರ್ಮಾಣವಾದ ನಂತರ ಬಹಳಷ್ಟು ಜನರು ಉದ್ಯೋಗವನ್ನು ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಜಿಲ್ಲೆಯ ಅಭಿವೃದ್ಧಿಗೆ ಉಸ್ತುವಾರಿ ಸಚಿವರು 4 ಸಾವಿರ ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಯಲ್ಲಿ 33 ಕೋಟಿ ರೂ ವೆಚ್ಚದಲ್ಲಿ ಹೆದ್ದಾರಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ನಾಲೆಗಳ ಅಗಲೀಕರಣಕ್ಕೆ 300 ಕೋಟಿ ರೂ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರದಲ್ಲಿ ಕೆಲಸ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರು ಹಂಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಆಡಳಿತದ ಕಾರ್ಯವೈಖರಿ ಹಾಗೂ ವೈಭವ ಕಂಡು ವಿಜಯನಗರ ಸಂಸ್ಥಾಪಕ ಶ್ರೀಕೃಷ್ಣದೇವರಾಯರ ಬಳಿ ಸಲಹೆ ಪಡೆದರು. ಮಾತ್ರವಲ್ಲದೆ ನಾನು ಇತಂಹ ಒಂದು ನಗರವನ್ನು ಕಟ್ಟಬೇಕೆಂದು ಬೆಂಗಳೂರನ್ನು ಆಯ್ಕೆ ಮಾಡಿಕೊಂಡು ದೇವಾಲಯ, ಕೆರೆಕಟ್ಟೆ ನಿರ್ಮಿಸಿದರು. ಅಂದು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸದಿದ್ದರೆ ಇಂದು ಕರ್ನಾಟಕದ ರಾಜಧಾನಿಯಾಗಿ ಬೆಂಗಳೂರು ಹೊರಹೊಮ್ಮುತ್ತಿರಲಿಲ್ಲ. ಐ.ಟಿ, ಬಿ.ಟಿ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಬಿ.ಪಾಂಡುಕುಮಾರ್, ಬೆಂಗಳೂರು ನಮ್ಮ ರಾಜ್ಯದ ರಾಜಧಾನಿ ಅಲ್ಲ, ಬದಲಿಗೆ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಕೇಂದ್ರವಾಗಿದೆ. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದೆ. ಇದೆಲ್ಲದರ ಕೀರ್ತಿ ನಾಡ ಪ್ರಭು ಕೆಂಪೇಗೌಡ ಅವರಿಗೆ ಸಲ್ಲಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪಾಧ್ಯಕ್ಷ ಅರುಣ್‌ಕುಮಾರ್, ಮುಡಾ ಅಧ್ಯಕ್ಷ ನಯೀಮ್, ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜಯರಾಂ ಇತರರಿದ್ದರು.

ಇದೇ ವೇಳೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಮೊಡಚಾಕನಹಳ್ಳಿಯ ಎಂ.ಆರ್.ನಿಖಿಲ್ ಹಾಗೂ ಹಳೆಬೂದನೂರಿನ ಎಚ್.ಪಿ.ಮನೋಜ್ ಅವರನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ನಡೆದ ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ನಾಡ ಪ್ರಭು ಕೆಂಪೇಗೌಡರ ಪುತ್ಥಳಿ ಮೆರವಣಿಗೆಗೆ ಡಿಸಿ ಡಾ.ಕುಮಾರ ಹಾಗೂ ಪುರುಷೋತ್ತಮಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಪೂರ್ಣ ಕುಂಭ ಹೊತ್ತ ಮಹಿಳೆಯರು, ಕಹಳೆ ಮತ್ತು ಡೊಳ್ಳು ಕುಣಿತದ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net