ಕೆಂಪೇಗೌಡರ ಆಡಳಿತ ಎಲ್ಲರಿಗೂ ಮಾದರಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣನೆ

Kempegowda Jayanti Mandya
Published on

ಮಂಡ್ಯ: ನಾಡಪ್ರಭು ಕೆಂಪೇಗೌಡ ಅವರ ಉತ್ತಮ ಆಡಳಿತ ಹಾಗೂ ಅಭಿವೃದ್ಧಿಯ ಚಿಂತನೆಯಿಂದಾಗಿ ಬೆಂಗಳೂರು ಮಹಾನಗರ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ಅವರ ಆಡಳಿತ ಹಾಗೂ ಚಿಂತನೆ ಎಲ್ಲರಿಗೂ ಮಾದರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ವಿವಿಧ ಸಂಘ-ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಪ್ರತಿ ವರ್ಷವೂ ಸರ್ಕಾರದಿಂದ ವಿವಿಧ ಜಯಂತಿ ಆಚರಿಸುತ್ತಿದ್ದು, ನಮ್ಮ ನಾಡಿನ ಅಭಿವೃದ್ಧಿಗೆ ಶ್ರಮಿಸಿದ ವಿವಿಧ ಮಹನೀಯರು ನೀಡಿದ ಕೊಡುಗೆಗೆ ಗೌರವ ಸಲ್ಲಿಸಿ ಮುಂದಿನ ಪೀಳಿಗೆಗೆ ತಿಳಿಸುವುದು ಜಯಂತಿ ಆಚರಣೆಯ ಉದ್ದೇಶವಾಗಿದೆ ಎಂದರು.
ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದು, ಅದಕ್ಕೆ ಕಾರಣ ಕೆಂಪೇಗೌಡರ ದೂರದೃಷ್ಟಿ ಹಾಗೂ ರೂಪಿಸಿದ ಯೋಜನೆ. ತಮ್ಮ ಆಳ್ವಿಕೆಯ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆ ನೋಡಿ ಪ್ರಭಾವಿತರಾಗಿ ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಪಣತೊಟ್ಟು ಬೆಂಗಳೂರು ನಗರವನ್ನು ನಿರ್ಮಿಸಿದರು. ಅವರ ದೃಷ್ಟಿಕೋನ ಎಲ್ಲ ವರ್ಗದ ಜನರಿಗೆ ಒಳಿತು ಹಾಗೂ ಅನುಕೂಲವಾಕರವಾಗಿತ್ತು. ಬೆಂಗಳೂರಿನಲ್ಲಿ ಸಮೃದ್ಧಿಯಾಗಿ ಕೆರೆ-ಕಟ್ಟೆಗಳ ನಿರ್ಮಾಣದ ಜತೆಗೆ ವ್ಯಾಪಾರಕ್ಕೆ ಉತ್ತಮ ಅವಕಾಶ ಕಲ್ಪಿಸಿದ್ದಾರೆ. ನೂರಾರು ವರ್ಷ ಜನರಿಗೆ ಉಪಯೋಗವಾಗುವಂತೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಪ್ರತಿಯೊಬ್ಬರಲ್ಲೂ ನಮ್ಮ ದೇಶ, ನಮ್ಮ ನಾಡು ಎಂಬ ಮನೋಭಾವನೆ ಬೆಳೆಯಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಇರಬೇಕು. ಸಮಾಜಮುಖಿ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಿ ಅವರೊಂದಿಗೆ ಕೈ ಜೋಡಿಸಿ. ರೈತರು ಬೆಳೆದ ಬೆಳೆ ಮಾರಾಟ ಮಾಡಲು ಸ್ಥಳ ಬೇಕಿತ್ತು. ಬೆಂಗಳೂರಿನಲ್ಲಿ ಸ್ಥಳ ಮಾಡಿಕೊಟ್ಟು, ವ್ಯಾಪಾರಕ್ಕೆ ಉತ್ತಮ ಪೇಟೆಗಳನ್ನು ನಿರ್ಮಾಣ ಮಾಡಿಕೊಟ್ಟವರು ಕೆಂಪೇಗೌಡರು ಎಂದು ತಿಳಿಸಿದರು.
ನಗರದಲ್ಲಿ ಉದ್ಯಾನಗಳ ಅಭಿವೃದ್ಧಿಗಾಗಿ 2 ಕೋಟಿ ರೂ. ಬಿಡುಗಡೆಯಾಗಿದ್ದು, ರೈಲ್ವೆ ನಿಲ್ದಾಣದ ಹತ್ತಿರ ಇರುವ ಕೆಂಪೇಗೌಡ ಪಾರ್ಕ್ ಅನ್ನು ಅಭಿವೃದ್ಧಿಪಡಿಸಿ ಮುಂದಿನ ವರ್ಷದೊಳಗೆ ಉದ್ಘಾಟನೆಗೆ ಸಿದ್ಧಪಡಿಸಲಾಗುವುದು. ಸರ್ಕಾರ ಬೆಂಗಳೂರಿನ ಹತ್ತಿರ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಲು ಚಿಂತಿಸುತ್ತಿದ್ದು, ಮಂಡ್ಯ ಅಥವಾ ಮದ್ದೂರು ಭಾಗದಲ್ಲಿ ಉತ್ತಮ ಸ್ಥಳವನ್ನು ಗುರುತಿಸಿ ನೀಡಲು ಸಿದ್ಧವಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವರೊಂದಿಗೂ ಚರ್ಚಿಸಲಾಗುವುದು ಎಂದರು.
ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಈ ಹಿಂದೆ ರಾಜ ಮಹರಾಜರು ಹಾಗೂ ಮಹಾನ್ ವ್ಯಕ್ತಿಗಳು ಸಮಾಜದಲ್ಲಿ ನಮ್ಮ ಜೀವಿತ ಅವಧಿಯಲ್ಲಿ ಸಮಾಜಕ್ಕೆ ಉಪಯುಕ್ತವಾಗುವ ಕೆರೆ-ಕಟ್ಟೆ, ಕಾಲುವೆ, ಮರ-ಗಿಡಗಳನ್ನು ಬೆಳೆಸಿ ಕೊಡುಗೆ ನೀಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಭಾವಿಸುತ್ತಿದ್ದರು. ಇಂದು ಕೆರೆ-ಕಟ್ಟೆಗಳ ನಿರ್ಮಾಣಕ್ಕೆ ಜೆಸಿಬಿ, ಟ್ರ್ಯಾಕ್ಟರ್ ಮುಂತಾದ ಆಧುನಿಕ ಯಂತ್ರಗಳಿವೆ. ಆದರೆ ಕೆಂಪೇಗೌಡರು ಸೇರಿದಂತೆ ಬೇರೆ ರಾಜ ಮಹರಾಜರು ಕೆರೆ ನಿರ್ಮಾಣ ಮಾಡಬೇಕದರೆ ಹಾರೆ, ಗುದ್ದಲಿ, ಬಾಂಡಲಿ ಮುಂತಾದ ಅವಶ್ಯಕ ವಸ್ತುಗಳನ್ನು ಕೆರೆ ನಿರ್ಮಾಣಕ್ಕಾಗಿ ಮೊದಲೇ ತಯಾರಿಸಿಕೊಳ್ಳಬೇಕಿತ್ತು. ಸಾವಿರಾರು ಕಾರ್ಮಿಕರ ಶ್ರಮ ಹಾಕಬೇಕಿತ್ತು. ಹೀಗಾಗಿ ಇಂತಹ ಕೆರೆಗಳನ್ನು ಸಂರಕ್ಷಿಸಿಕೊಳ್ಳಬೇಕು ಎಂದರು.
ಮುಡಾ ಅಧ್ಯಕ್ಷ ನಹೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ಶಿವಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ಕೊಮ್ಮೇರಹಳ್ಳಿ ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಂದ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಅವರು ತಮ್ಮ ತಂದೆ ಜತೆಯಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಹೋದಾಗ ಅಲ್ಲಿಯ ಬೀದಿಗಳಲ್ಲಿ ಇದ್ದಂತಹ ಚಿನ್ನ ಬೆಳ್ಳಿ ಮಾರಾಟ, ಸಮೃದ್ಧವಾದ ಆಸ್ತಿಯನ್ನು ಕಂಡು ಇಂತಹ ಒಂದು ನಗರವನ್ನು ನಾನು ನಮ್ಮ ಪ್ರದೇಶದಲ್ಲಿ ಕಟ್ಟಬೇಕು ಎಂದು ಮನದಟ್ಟು ಮಾಡಿಕೊಂಡರು. ಎಷ್ಟೋ ಪ್ರದೇಶಗಳನ್ನು ನೋಡಿ ಯಾವುದು ಕೂಡ ಸರಿ ಅನಿಸದೆ ಇದ್ದಾಗ ಬೆಂದಕಾಳೂರು ಎಂಬ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಬೆಂಗಳೂರು ನಿರ್ಮಾಣಕ್ಕೆ ಮುಂದಾಗುತ್ತಾರೆ. ಬೆಂಗಳೂರು ನಗರವನ್ನು ನಿರ್ಮಿಸಿ 4 ದಿಕ್ಕಿನಲ್ಲೂ 4 ಗೋಪುರಗಳನ್ನು ಕಟ್ಟಿಸುತ್ತಾರೆ ನಾಡಿನ ಎಲ್ಲ ಜನರಿಗೂ ಎಲ್ಲ್ಲ ಜನಾಂಗದವರಿಗೂ 54 ಪೇಟೆ ಗಳನ್ನು ನಿರ್ಮಾಣ ಮಾಡುತ್ತಾರೆ. ಆ ಪೇಟೆಗಳಲ್ಲಿ ಆಯಾ ಜನಾಂಗದವರು ವ್ಯವಹಾರ ವ್ಯಾಪಾರ ಮಾಡುವುದಕ್ಕೆ ಅನುವು ಮಾಡಿ ಕೊಟ್ಟರು ಮತ್ತು ಸರ್ವರಿಗೂ ಸುಖ ಬಾಳು ಸರ್ವರಿಗೂ ಸಮ ಬಾಳು ನೀಡಿದರು. ಜನರಿಗೆ ನೀರು ಒದಗಿಸಲು ನೂರಾರು ಕೆರೆ ಕಟ್ಟೆ ಬಾವಿಗಳನ್ನು ಮಾಡಿದರು. ಎಲ್ಲ ಜನರಿಗೂ ದೇವಾಲಯಗಳನ್ನು ನಿರ್ಮಾಣ ಮಾಡಿದರು. ಜನರಿಗೆ ಓಡಾಡುವುದಕ್ಕೆ ವಾಯು ವಿಹಾರಕ್ಕಾಗಿ ವಿವಿಧ ಪಾರ್ಕ್ ಅನ್ನು ಕೂಡ ನಿರ್ಮಿಸಿದರು.

ಸಾಧಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜ್ಯೋತಿ ನಾಗಣ್ಣಗೌಡ, ಎ.ಎಲ್.ಕೆಂಪುಗೌಡ, ತಗ್ಗಹಳ್ಳಿ ವೆಂಕಟೇಶ್, ಎನ್.ಕೆ.ಯುವ ಬ್ರಿಗೇಡ್ ಹಾಗೂ ಎ.ಅರವಿಂದ್ ಸನ್ಮಾನ ಮಾಡಲಾಯಿತು. ಜಿಲ್ಲಾ ಮಟ್ಟದ ಕೆಂಪೇಗೌಡ ಜಯಂತಿ ಆಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ-ಮದ್ದೂರು ತಾಲೂಕು ಪೂರ್ಣ ಪ್ರಜ್ಞಾ ಕಾನ್ವೆಂಟ್ ಶಾಲೆಯ ಲಿಖಿತಾರಾಜು, ದ್ವಿತೀಯ ಬಹುಮಾನ-ಪಾಂಡವಪುರ ತಾಲೂಕು ಎಲ್.ಕೆ.ಆರ್ ಸಿಬಿಎಸ್ಸಿ ಶಾಲೆಯ ಪ್ರಜ್ಞಾ, ತೃತೀಯ ಬಹುಮಾನ- ಮಂಡ್ಯ ಉತ್ತರ ವಲಯದ ದೊಡ್ಡಗರುಡನಹಳ್ಳಿ ಸರ್ಕಾರಿ ಪ್ರೌಢಶಾಲೆ ಆಶಾ ಅವರಿಗೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನ-ಶ್ರೀರಂಗಪಟ್ಟಣ ತಾಲೂಕು ಅರಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಿ.ಕೆ.ದೀಪಿಕಾ, ದ್ವಿತೀಯ ಬಹುಮಾನ- ಮದ್ದೂರು ತಾಲೂಕು ಶಿವಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿ.ಎನ್.ಕಿಶನ್ ಅವರಿಗೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net