

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸುವಲ್ಲಿ ನಾಡಪ್ರಭು ಕೆಂಪೇಗೌಡರು ಪ್ರಮುಖ ಪಾತ್ರ ವಹಿಸಿದ್ದರು. ಕೆಂಪೇಗೌಡರ 108 ಅಡಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ಮುಂದಾಗಿರುವುದು ಸಂತೋದಾಯಕ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಽಕಾರಿ ಗೀತಾ ಸಿ.ಡಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು 64 ಪೇಟೆಗಳು, 10 ಕೆರೆಗಳು, ದೇವಾಲಯಗಳು, ಅನ್ನಛತ್ರಗಳು, ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಾಮಾಜಿಕ ಸೇವೆ ಮಾಡಿದ್ದಾರೆ ಎಂದರು.
ಜಯAತಿ ಪ್ರಯುಕ್ತ ನಡೆಸಿದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಲಘಟಗಿ ಗುಡ್ ನ್ಯೂಸ್ ಕಾಲೇಜಿನ ಪ್ರಾಚಾರ್ಯ ಡಾ. ಮಹೇಶ ಹೊರಕೇರಿ `ಕೆಂಪೇಗೌಡರ ಜೀವನ, ಸಾಧನೆಗಳು' ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.
ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಹಾಗೂ ಸಮಾಜದ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.