

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಭಾರತ ದೇಶದಲ್ಲಿ ಸಾವಿರಾರು ಸಾಮಂತ ರಾಜರು ಆಳ್ವಿಕೆ ನಡೆಸಿದ್ದಾರೆ, ಇವರ ಪೈಕಿ ಕೆಂಪೇಗೌಡರ ಹೆಸರು ಚಿರಸ್ಥಾಯಿಯಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ ಆಚರಣಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ 515ನೇ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು.
ನಾಡಿನ ಒಳಿತಿಗಾಗಿ ತಮ್ಮ ಜೀವನವನ್ನು ಪಣವಿಟ್ಟು ಕೆಲಸ ಮಾಡಿದ ಧೀಮಂತ ನಾಯಕರಾಗಿದ್ದರು ಎಂದು ಬಣ್ಣಿಸಿದರು. ಕೆಂಪೇಗೌಡರು ದಕ್ಷ ಮತ್ತು ದೂರದೃಷ್ಟಿಯಳ್ಳ ಆಡಳಿತಗಾರನಾಗಿದ್ದರು. ಇದರ ಫಲವಾಗಿ ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂತಹ ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬದುಕು ಕಟ್ಟಿಕೊಂಡಿದ್ದಾರೆ: ನಾಡಪ್ರಭು ಕೆಂಪೇಗೌಡರ ಸಾಧನೆ ಇಂದಿನ ಯುವ ಪೀಳಿಗೆಗೆ ಆದರ್ಶವಾಗಲಿ ಎಂದು
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಪ್ಪಯ್ಯಣ್ಣ ಆಶಿಸಿದರು. ಅವರ ಅನನ್ಯ ಸಾಧನೆಯ ಫಲವಾಗಿ ಇಂದು ಸಾವಿರಾರು ಜನ ಬೆಂಗಳೂರು ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಬಣ್ಣಿಸಿದರು. ಕೆಂಪೇಗೌಡರ ದೂರದೃಷ್ಟಿ, ಆಡಳಿತದ ವೈಖರಿಯನ್ನು ಇಂದಿನ ಜನಪ್ರತಿನಿಧಿಗಳು ಮಾರ್ಗದರ್ಶನವಾಗಿ ಅನುಸರಿಸಿದರೆ ನಾಡು ಮತ್ತಷ್ಟು ಅಭಿವೃದ್ಧಿ ಹೊಂದಿಲಿದೆ ಎಂದು ಅಭಿಪ್ರಾಯಪಟ್ಟರು.