ಕೆಂಪೇಗೌಡ ಜಯಂತಿ ಆಚರಣೆಗೆ ಸಿದ್ಧತೆ: ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ಸಿ.ರಮೇಶ್ ಮಾಹಿತಿ

2 (2)
Published on

ಮಂಡ್ಯ: ಜಿಲ್ಲಾಡಳಿತದ ನೇತೃತ್ವದಲ್ಲಿ ಜೂ.27ರಂದು ನಗರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಮುಂದಿನ ವರ್ಷದಿಂದ 3 ದಿನದ ಆಚರಣೆಗೆ ಚಿಂತಿಸಲಾಗಿದೆ ಎಂದು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ಸಿ.ರಮೇಶ್ ಮಾಹಿತಿ ನೀಡಿದರು.

ಮುಂದಿನ ಬಾರಿ ಮೊದಲ ದಿನ ಕೃಷಿ ಮೇಳ, ಎರಡನೇ ದಿನ ಉದ್ಯೋಗ ಮೇಳ, 3ನೇ ದಿನ ಮಹಿಳಾ ಸಮಾವೇಶ ನಡೆಸುವರು ಆಲೋಚನೆಯಿದೆ. ಜತೆಗೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮುದಾಯದ ಸಾಧಕರಿಗೆ ಕೆಂಪೇಗೌಡರ ಹೆಸರಿನ ಪ್ರಶಸ್ತಿ ನೀಡಲಾಗುವುದು. ಇನ್ನು ಈ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಡ್ಯ ನಗರಸಭೆ, ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್, ಅಖಿಲ ಕರ್ನಾಟಕ ಒಕ್ಕಲಿಗರ ಸೇವಾ ಟ್ರಸ್ಟ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ, ಕನ್ನಡ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ನಡೆಯಲಿದೆ. ಈಗಾಗಲೇ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಲವು ಪೂರ್ವಭಾವಿ ಸಭೆಗಳನ್ನು ನಡೆಸಿ ಕಾರ್ಯಕ್ರಮದ ರೂಪುರೇಷೆ ತಯಾರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ್ಯಕ್ರಮಕ್ಕಾಗಿ ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚಿಸಲಾಗಿದೆ. ಇದರ ಮೂಲಕ ವೇದಿಕೆ, ಮೆರವಣಿಗೆ, ಆಹಾರ, ಅಭಿನಂದನಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕಾರ್ಯಕ್ರಮವನ್ನು ಒಕ್ಕಲಿಗ ಸಮುದಾಯಕ್ಕೆ ಸೀಮಿತಗೊಳಿಸದೇ, ವಿವಿಧ ಸಮುದಾಯದ ಪ್ರತಿನಿಧಿಗಳನ್ನು ಒಳಗೊಂಡಂತೆ ನಾಲ್ಕೈದು ಲಕ್ಷ ರೂ ವೆಚ್ಚದಲ್ಲಿ ಜಯಂತಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಅಂದು ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಬಳಿ ಕೆಂಪೇಗೌಡರ ಅಲಂಕೃತ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಡಿಸಿ ಕಚೇರಿಯಿಂದ ಹೊರಡುವ ಮೆರವಣಿಗೆಯು, ಎಚ್.ಕೆ.ವೀರಣ್ಣಗೌಡ ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ, ಜೆ.ಸಿ.ವೃತ್ತ, ಮಹಾವೀರ ವೃತ್ತ, ವಿ.ವಿ.ರಸ್ತೆ ಮೂಲಕ ಕಲಾಮಂದಿರ ತಲುಪಲಿದೆ. ಹತ್ತಾರು ಜಾನಪದ ಕಲಾ ತಂಡಗಳ ಕಲಾವಿದರು ಮೆರವಣಿಗೆಯುದ್ಧಕ್ಕೂ ಕಲಾ ಪ್ರದರ್ಶನ ನೀಡುವರು. ಕಲಾಮಂದಿರದಲ್ಲಿ ಬೆಳಗ್ಗೆ 11ಕ್ಕೆ ನಡೆಯುವ ವೇದಿಕೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ಶಾಸಕ ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು ಎಂದು ವಿವರಿಸಿದರು.

ಇದೇ ವೇಳೆ ಬಿಬಿಎಂಸಿ ವಿಶೇಷ ಆಯುಕ್ತ ಜಯರಾಮ್ ರಾಯಪುರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಅವರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಂಜೆ 5ಕ್ಕೆ ಕಲಾಮಂದಿರದಲ್ಲಿ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಆಧರಿಸಿ ಸಿರಿಗೆ ಸೆರೆ ನಾಟಕವನ್ನು ಜನ-ದನಿ ಸಂಘಟನೆ ಕಲಾವಿದರು ಪ್ರಸ್ತುತಪಡಿಸುವರು ಎಂದು ಹೇಳಿದರು.

ವಿವಿಧ ಸಂಘಟನೆಗಳ ಕೃಷ್ಣ, ಚಿಕ್ಕೋನಹಳ್ಳಿ ತಮ್ಮಣ್ಣ, ಬೇಲೂರು ಸೋಮಶೇಖರ್, ಬಿ.ಎಂ.ಅಪ್ಪಾಜಪ್ಪ, ಬಸರಾಳು ಕೃಷ್ಣೇಗೌಡ, ಸುಜಾತಾ ಕೃಷ್ಣ, ಕೀಲಾರ ಕೃಷ್ಣೇಗೌಡ, ಸಂಪಹಳ್ಳಿ ಶಿವಕುಮಾರ್, ಸುದರ್ಶನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net