

ಮದ್ದೂರು: ನಾಡಪ್ರಭು ಕೆಂಪೇಗೌಡರ ಜಯಂತಿ ಜನಮುಖಿ ಮತ್ತು ಅರ್ಥಗರ್ಭಿತವಾಗಿರಬೇಕು ಎಂಬ ಆಶಯದಿಂದ ಕೆಂಪೇಗೌಡರ ಸಾಧನೆ ಹಾಗೂ ವ್ಯಕ್ತಿಚಿತ್ರವುಳ್ಳ ಆಕರ್ಷಕ ಸ್ತಬ್ಧಚಿತ್ರ ತಾಲೂಕಿನಾದ್ಯಾಂತ ಎಲ್ಲ ಗ್ರಾಮ ಪಂಚಾಯಿತಿಗಳ ಕೇಂದ್ರಸ್ಥಾನದ ಹಳ್ಳಿಗಳ ಮೂಲಕ ಸಂಚರಿಸಲಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದಿಂದ ಆಯೋಜಿಸಿದ್ದ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದರು. ಕೆಂಪೇಗೌಡರ ಸಾಧನೆ ಮತ್ತು ದೂರದೃಷ್ಟಿ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಜು.27 ರಂದು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಜಯಂತಿಗೆ ಎಲ್ಲರನ್ನೂ ಆಹ್ವಾನಿಸುವುದು ಇದರ ಉದ್ದೇಶವಾಗಿದೆ ಎಂದರು.
ಸ್ತಬ್ಧಚಿತ್ರ ಮೆರವಣಿಗೆಯ ಉಸ್ತುವಾರಿಯನ್ನು ಕೆ.ರವಿಕುಮಾರ್ ವಹಿಸಲಿದ್ದಾರೆ ಎಂದು ನೂತನ ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದರು.
ಮುಖಂಡ ವಿ.ಬಿ.ಶಂಕರೇಗೌಡ ಮಾತನಾಡಿ, ಜಯಂತಿ ಯಶಸ್ಸಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ನ.ಲಿ. ಕೃಷ್ಣ, ಎಸ್.ದಯಾನಂದ, ಹಾಗಲಹಳ್ಳಿ ಬಸವರಾಜು, ಸೊ.ಸಿ.ಪ್ರಕಾಶ್, ಪ್ರಭುಲಿಂಗ, ವಿ.ಎಚ್.ಶಿವಲಿಂಗಯ್ಯ, ಸಾಗರ್, ಶ್ರೀನಿವಾಸ್, ಕೆ.ಜಿ.ಉಮೇಶ್, ಪಟೇಲ್ ಹರೀಶ್, ಕರಡ ಕೆರೆ ವಸಂತ, ಜನಾರ್ಧನ್, ಮಮತಾ ಶಂಕರೇಗೌಡ, ಚನ್ನಸಂದ್ರ ಲಕ್ಷ್ಮಣ್, ಬೆಸಗರಹಳ್ಳಿ ಪ್ರಸನ್ನ, ಅಜ್ಜಹಳ್ಳಿ ಬಸವರಾಜು, ಗುಡಿದೊಡ್ಡಿ ಶಿವಲಿಂಗಯ್ಯ, ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.