ರಾಜ ಪರಂಪರೆಗೆ ಮಾದರಿಯಾಗಿದ್ದ ಕೆಂಪೇಗೌಡರ ಆಡಳಿತ

HUN-AUG-9-1(NADAPRABHU KEMPEGOWDA JAYANTHI)
ಹುಣಸೂರು ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿ.ಡಿ.ಹರೀಶ್‌ಗೌಡ, ಕೆ.ಗಣೇಶ್‌ಗೌಡ, ಸತೀಶ್ ಪಾಪಣ್ಣ, ಉಂಡುವಾಡಿ ಸಿ.ಚಂದ್ರೇಗೌಡ, ಬಿಳಿಕೆರೆ ಗೌರಿಶಂಕರ್ ಇತರರಿದ್ದರು.
Published on

ಹುಣಸೂರು: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಹಾಗೂ ಮಾನವೀಯತೆಯ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.

ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಶನಿವಾರ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡರು ಬೆಂಗಳೂರು ನಿರ್ಮಾತೃ ಮಾತ್ರ ಆಗಿರಲಿಲ್ಲ. ಬದಲಾಗಿ ಆವರ ಆಡಳಿತ ಇತರ ರಾಜಪರಂಪರೆಗಳಿಗೂ ಮಾದರಿಯಾಗಿತ್ತು. ಸಮಾಜದ ಸಣ್ಣಪುಟ್ಟ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ಏಳಿಗೆಗಾಗಿ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಯೋಜನೆಗಳನ್ನು ರೂಪಿಸಿದರು. ಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದರು. ಇಂದು ಒಕ್ಕಲಿಗ ಸಮಾಜದಲ್ಲಿ ಎಲ್ಲರೂ ಶಿಕ್ಷಿತರಾಗುತ್ತಿದ್ದೇವೆ. ಜತೆಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವ ಮತ್ತು ಎಲ್ಲರನ್ನೂ ಒಂದಾಗಿ ನೋಡುವ ಮನೋಭಾವ ರೂಢಿಸಿಕೊಳ್ಳಬೇಕೆಂದರು.

ಸಮುದಾಯ ಭವನ ನಿರ್ಮಾಣ: ನಗರ ವ್ಯಾಪ್ತಿಯಲ್ಲಿ ಸುಸಜ್ಜಿತ ಸಮುದಾಯ ಭವನ ಸ್ಥಾಪನೆಗಾಗಿ ಒಂದು ಎಕರೆ ಭೂಮಿಯನ್ನು ಗುರುತಿಸಿ, ಭವನ ನಿರ್ಮಾಣಕ್ಕಾಗಿ ಸಂಪೂರ್ಣ ಸಹಕಾರ ನೀಡುವುದು ನನ್ನ ಜವಾಬ್ದಾರಿಯಾಗಿದ್ದು ಅದನ್ನು ಖಂಡಿತ ನೆರವೇರಿಸುತ್ತೇನೆ. ಈ ಹಿಂದೆ ಆರ್.ಅಶೋಕ್ ಕಂದಾಯ ಮಂತ್ರಿಯಾಗಿದ್ದ ವೇಳೆ ಬಸ್ ಡಿಪೋ ಹಿಂಭಾಗದಲ್ಲಿ ನೀಡಿದ್ದ ಭೂಮಿಯನ್ನು ಸಮಾಜದ ಇತರ ಕಾರ್ಯಗಳಿಗೆ ಉಪಯೋಗಿಸಿಕೊಳ್ಳೋಣ ಎಂದರು.

ಮಾಜಿ ಸಂಸದ ಪ್ರತಾಪ್‌ಸಿಂಹ ಮಾತನಾಡಿ, ನಾಡಪ್ರಭುವಿನಿಂದ ಆರಂಭಗೊಂಡು ಕೆಂಗಲ್ ಹನುಮಂತಯ್ಯ, ಎಸ್.ಎಂ.ಕೃಷ್ಣ, ಮಾಜಿ ಪ್ರಧಾನಿ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಎಲ್ಲರೂ ಸಮಾಜದ ನಾಯಕರಾಗಿ ದೇಶಸೇವೆಯನ್ನು ನಿಸ್ವಾರ್ಥದಿಂದ ಮಾಡಿದ್ದಾರೆ. ಕುಮಾರಸ್ವಾಮಿ ಸಾಲದ ಶೂಲದಲ್ಲಿ ಸಿಲುಕಿದ್ದ ರೈತ ಸಮುದಾಯಕ್ಕೆ ಸಾಲಮನ್ನಾ ಮಾಡುವ ಮೂಲಕ ಆಸರೆಯಾದವರು. ಎಲ್ಲ ಸಮುದಾಯಗಳನ್ನು ಒಳಗೊಂಡು ಕರೆದುಕೊಂಡು ಹೋಗುವವರು ನಾವು. ಆದರೆ ನಮ್ಮನ್ನೇ ತುಳಿಯುವ ಮನಸ್ಥಿತಿಯವರು ಇದೀಗ ಹುಟ್ಟಿಕೊಂಡಿದ್ದಾರೆ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಮೈಸೂರಿನ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಘದ ತಾಲೂಕು ಅಧ್ಯಕ್ಷ ಕೆ.ಗಣೇಶ್‌ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಪ್ರಾಂಶುಪಾಲ ಎಚ್.ಆರ್.ಸಿದ್ದೇಗೌಡ ನಾಡಪ್ರಭು ಕೆಂಪೇಗೌಡರ ಆಡಳಿತ, ಸಾಧನೆಗಳ ಕುರಿತು ಮಾಹಿತಿ ನೀಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶ್ರೇಯಸ್ ಅವರನ್ನು ಸನ್ಮಾನಿಸಲಾಯಿತು.

ಒಕ್ಕಲಿಗರ ಸಂಘದ ತಾಲುಕು ಪ್ರಧಾನ ಕಾರ್ಯದರ್ಶಿ ಬಿ.ಎಸ್.ಯೋಗಾನಂದಕುಮಾರ್, ದೇವನಹಳ್ಳಿ ಸೋಮಶೇಖರ್, ಎಚ್.ಜಯರಾಂ, ಬಸವರಾಜು ಕಿರಂಗೂರು, ಸಿ.ಎಸ್.ರುದ್ರೇಗೌಡ, ರಾಮಕೃಷ್ಣೇಗೌಡ, ಚಿಕ್ಕಹುಣಸೂರು ಗೋವಿಂದೇಗೌಡ, ಸುನೀತಾ ಜಯರಾಮೇಗೌಡ, ರವೀಗೌಡ, ಸ್ವಾಮಿಗೌಡ, ಜಗದೀಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net