

ಮೈಸೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಇಂದು ಜಾಗತಿಕವಾಗಿ ಗಮನ ಸೆಳೆಯುತ್ತಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ. ಶ್ರೀನಿವಾಸ ಗೌಡ ಹೇಳಿದರು.
ಮೈಸೂರು ವಕೀಲರ ಸಂಘ ಶನಿವಾರ ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೆಂಗಳೂರು ನಗರ ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಲು ಕೆಂಪೇಗೌಡರು 500 ವರ್ಷಗಳ ಹಿಂದೆಯೇ ಬುನಾದಿ ಹಾಕಿದರು. ನಾಡು ನಿರ್ಮಾಣಕೋಸ್ಕರ ಕೆಂಪೇಗೌಡರು ಸರ್ವವವನ್ನು ತ್ಯಾಗ ಮಾಡಿದರು ಎಂದು ಸ್ಮರಿಸಿದರು.
ಸಂಗೊಳ್ಳಿ ರಾಯಣ್ಣ, ಬಸವಣ್ಣ, ಕೆಂಪೇಗೌಡ ಮುಂತಾದ ಮಹನೀಯರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಿ ನೋಡಬಾರದು. ಅವರು ನಾಡಿನ ಅಭಿವೃದ್ಧಿಗೆ, ಜನರ ಕಲ್ಯಾಣಕೋಸ್ಕರ ದುಡಿದವರು. ಇಂತಹ ಮಹನೀಯರ ಆದರ್ಶಗಳನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಕೀಲರು ಹಾಗೂ ನ್ಯಾಯಾಧೀಶರು ನಿರಂತರ ಅಧ್ಯಯನದ ಕಡೆಗೆ ಗಮನ ಹರಿಸಬೇಕು. ನನಗೆ ಎಲ್ಲವೂ ತಿಳಿದಿದೆ ಎಂಬ ಭಾವನೆ ಸರಿಯಲ್ಲ. ಈ ರೀತಿಯ ಭಾವನೆ ಹೊಂದಿದವರು ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಪ್ರತಿದಿನ ಒಂದಲ್ಲ ಒಂದು ವಿಷಯಗಳನ್ನು ಕಲಿಯಲು ಇದ್ದೇ ಇರುತ್ತದೆ. ಈ ರೀತಿ ಕಲಿಯುತ್ತಾ ಹೋದರೆ ಯಶಸ್ಸು ನಿಶ್ಚಿತ ಎಂದು ಹೇಳಿದರು.
ವಿದ್ಯಾವರ್ಧಕ ಕಾಲೇಜಿನಲ್ಲಿ ನಾನು ಕಾನೂನು ಪದವಿ ಪಡೆದೆ. ಆ ಕಾಲದಲ್ಲಿ ವಕೀಲರುಗಳೇ ನಮಗೆ ಪ್ರಾಧ್ಯಾಪಕರಾಗಿದ್ದರು. ಹಲವಾರು ಹಿರಿಯ ವಕೀಲರು ಪ್ರಾಧ್ಯಾಪಕರಾಗಿ ನಮಗೆ ಮಾರ್ಗದರ್ಶನ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನನಗೆ ಪ್ರಾಧ್ಯಾಪಕರಾಗಿ ಮಾರ್ಗದರ್ಶನ ನೀಡಿದ್ದರು. ಅವರನ್ನು ನಾನು ಇಂದಿಗೂ ಸ್ಮರಿಸಿಕೊಳ್ಳುತ್ತೇನೆ ಎಂದು ಹೇಳಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ತುಮಕೂರು ಶಿರಾದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಂಜಾವದೂತ ಸ್ವಾಮೀಜಿ ಮಾತನಾಡಿ, ಕೆಂಪೇಗೌಡ ಸೇರಿದಂತೆ ಪ್ರತಿಯೊಂದು ಮಹನೀಯರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಬದಲಾವಣೆಗಳನ್ನು ಕಾಣಬಹುದು. ಆದರ್ಶ ವ್ಯಕ್ತಿಗಳ ಜಯಂತಿ ಆಚರಿಸಿದರೆ ಮಾತ್ರ ಸಾಲದು, ಅವರ ವ್ಯಕ್ತಿತ್ವ ಅರಿಯುವ ಕಾರ್ಯ ಮಾಡಬೇಕು, ಹಾಗಿದ್ದಲ್ಲಿ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.
ಕೆಂಪೇಗೌಡರಲ್ಲಿ ದೂರದೃಷ್ಟಿ ಇತ್ತು. ಅವರು ಬಹಳ ದೊಡ್ಡ ಸಾಮ್ರಾಜ್ಯ ಕಟ್ಟಲಿಲ್ಲ. ಆದರೆ ಅವರು ಮುಂದಿನ 500 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರವನ್ನು ಕಟ್ಟುವ ಕೆಲಸ ಮಾಡಿದರು. ಒಂದುವೇಳೆ ಕೆಂಪೇಗೌಡ ಆದರ್ಶವನ್ನು ಸರ್ಕಾರ ಅಳವಡಿಸಿಕೊಂಡರೆ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಡಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ. ಮಹದೇವಸ್ವಾಮಿ, ಕಾರ್ಯದರ್ಶಿ ಎಸ್. ಉಮೇಶ್, ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮನೋರೋಗ ವಿಭಾಗದ ಮುಖ್ಯಸ್ಥ ಡಾ. ಬಿ.ಎನ್. ರವೀಶ್, ರಾಜ್ಯ ವಕೀಲರ ಪರಿಷತ್ ಸದಸ್ಯ ಬಿ.ಆರ್. ಚಂದ್ರಮೌಳಿ ಹಾಗೂ ಇತರರು ಇದ್ದರು.