

ಧಾರವಾಡ: ರಾಷ್ಟ್ರಮಟ್ಟದಲ್ಲಿ ಬೆಳೆದು ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಬೆಂಗಳೂರು ಮಹಾನಗರವನ್ನು ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಸ್ಥಾಪಿಸಿದರು. ರಾಜ್ಯದ ಇಂದಿನ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಅವರ ಆಡಳಿತ ಸೂತ್ರ, ಜನಕಲ್ಯಾಣ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಜಾತಿ ಪದ್ಧತಿಯ ವಿರುದ್ಧ, ರಾಜ್ಯದ ಪ್ರಗತಿಗಾಗಿ ಹೋರಾಡಿದ್ದಾರೆ. ಶಾಲೆ- ಕಾಲೇಜು, ಕೆರೆ, ರಸ್ತೆ, ಮಾರುಕಟ್ಟೆ ನಿರ್ಮಿಸಲು ವಿಶೇಷ ಒತ್ತು ನೀಡಿದ್ದಾರೆ. ಅವರ ಆಡಳಿತ ಕಾಲವನ್ನು ಕರ್ನಾಟಕದ ಸುವರ್ಣ ಯುಗವೆಂದು ಕರೆಯಲಾಗುತ್ತಿದೆ. ಬೆಂಗಳೂರಿಗೆ ವಿಶೇಷ ಆದ್ಯತೆ ನೀಡಿ ನಗರ ನಿರ್ಮಿಸಿದ್ದಾರೆ. ಅದು ಇಂದು ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿದೆ ಎಂದರು.
ಗೋಕುಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎ್.ಬಿ. ಸೊರಟೂರ ಉಪನ್ಯಾಸ ನೀಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ ಟಿ.ಕೆ., ಮಾಣಿಕ್ಯ ಚಿಲ್ಲೂರು, ಹನುಮಂತಪ್ಪ ನೇಗಿನಹಾಳ ಹಾಗೂ ಒಕ್ಕಲಿಗ ಸಮುದಾಯದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು.