ಕೆಂಪೇಗೌಡರು ಕಟ್ಟಿದ ಕೆರೆ-ಕಟ್ಟೆಗಳು ಇಂದಿಗೂ ಜೀವಂತ; ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿಕೆ

27 HVR 4
Published on

ಹಾವೇರಿ: ಬೆಂಗಳೂರು ನಗರ ನಿರ್ಮಾಣದ ರೂವಾರಿಯಾದ ಕೆಂಪೇಗೌಡರು ದೂರದೃಷ್ಟಿಯುಳ್ಳ ದಕ್ಷ ಆಡಳಿತಗಾರ. ಅಪರೂಪದ ವ್ಯಕ್ತಿತ್ವದ ನಾಡಪ್ರಭು ಕೆಂಪೇಗೌಡರ ಆಡಳಿತ ದಕ್ಷತೆ ಹಾಗೂ ಸಾಮಾಜಿಕ ಕಾರ್ಯಗಳು ಇಂದಿನ ಯುವ ಸಮೂಹಕ್ಕೆ ಆದರ್ಶಪ್ರಾಯವಾಗಿವೆ. ಅವರು ಕಟ್ಟಿಸಿದ ಹಲವು ಬೃಹತ್ ಕೆರೆ-ಕಟ್ಟೆಗಳು ಇಂದಿಗೂ ಜೀವಸೆಲೆಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
ನಗರದ ಹೊಸಮಠ ಶ್ರೀ ಮುರುಘರಾಜೇಂದ್ರ ಪದವಿ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಗಾರ್ಡನ್ ಸಿಟಿ ಎಂದು ಹೆಸರು ಪಡೆದಿರುವ ಬೆಂಗಳೂರು ನಗರದ ನಿರ್ಮಾಣಕ್ಕಾಗಿ ಕೆಂಪೇಗೌಡರು ಅಡಿಗಲ್ಲು ಹಾಕಿದರು. ಅವರ ದೂರದೃಷ್ಟಿಯಿಂದ ಇಂದು ಜಗತ್ತಿನ ಅತ್ಯಂತ ಪ್ರತಿಷ್ಠಿತ ನಗರವಾಗಿ, ರಾಜ್ಯದ ರಾಜಧಾನಿಯಾಗಿ ಬೆಂಗಳೂರು ಬೆಳೆದು ನಿಂತಿದೆ. ಉತ್ತಮ ರಸ್ತೆ ನಿರ್ಮಾಣ, ರಸ್ತೆ ಪಕ್ಕದಲ್ಲಿ ಸಾಲುಮರಗಳನ್ನು ಬೆಳೆಸುವ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಜನಪರ ಆಡಳಿತಗಾರರು, ಸಮಾಜಮುಖಿಯಾಗಿ ಚಿಂತಿಸಿದವರು. ದೂರದೃಷ್ಟಿಯ ಚಿಂತನೆಯಿಂದ ನಿರ್ಮಾಣ ಮಾಡಿರುವ ಬೆಂಗಳೂರು ನಗರ ಇಂದಿಗೂ ಜಗತ್ತು ಕಣ್ತೆರೆದು ನೋಡುವಂತಾಗಿದೆ. ಅವರ ಸಮಾಜ ಮುಖಿ ಕಾರ್ಯಗಳು ಇಂದಿಗೂ ಅಜರಾಮರವಾಗಿ ಉಳಿದಿವೆ ಎಂದರು.
ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ ಸಾಧನೆಗಳ ಬಗ್ಗೆ ಬೆಂಗಳೂರಿನ ಸಾಹಿತಿ ಎಂ.ವಿ.ತ್ಯಾಗರಾಜ ಮಾತನಾಡಿ, ಪ್ರತಿಯೊಬ್ಬ ಯುವಕರು ಕೆಂಪೇಗೌಡರ ವ್ಯಕ್ತಿತ್ವ, ಸಾಧನೆಗಳನ್ನು ಮೈಗೂಡಿಸಿಕೊಂಡು ತಾವು ಹುಟ್ಟಿ ಬೆಳೆದ ಊರುಗಳನ್ನು ಕೆಂಪಗೌಡರ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಗದೀಶ್ವರ, ಡಯಟ್ ಉಪನ್ಯಾಸಕ ಅಡಿಗ, ಎಸ್‌ಜೆಎಂ ಪಿಯು ಕಾಲೇಜು ಪ್ರಾಚಾರ್ಯ ಎ.ಲಿಂಗರಾಜ, ಎಂ.ಎಸ್.ಕೋರಿಶೆಟ್ಟರ್, ಆರ್.ಬಿ.ವೆಂಕಟೇಶ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಿದ್ಲಿಂಗೇಶ್ವರ ರಂಗಣ್ಣನವರ ಸ್ವಾಗತಿಸಿದರು. ಉಪನ್ಯಾಸಕ ಶಿವಾನಂದ ಸಂಗಾಪುರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net