ಕೆಮ್ಮಣ್ಣು ನಾಲೆ ಹೂಳೆತ್ತಿ: ಸಮಸ್ಯೆ ಬಗೆಹರಿಸಿ

Story
Published on

ಮದ್ದೂರು: ಪಟ್ಟಣದ ಮೂಲಕ ಹಾದು ಹೋಗುವ ಕೆಮ್ಮಣ್ಣು ನಾಲೆಯಲ್ಲಿ ಗಿಡಗಂಟಿಗಳು, ಹೂಳು ತೆರವುಗೊಳಿಸದ ಕಾರಣ ಕೊನೆಯ ಭಾಗದ ಜಮೀನುಗಳಿಗೆ ನೀರು ಸಮರ್ಪಕವಾಗಿ ಹರಿಯದೆ ಸಮಸ್ಯೆಯಾಗುತ್ತಿದೆ.

ಮದ್ದೂರಮ್ಮನ ಕೆರೆಯಿಂದ ಮಾಲಗಾರನಹಳ್ಳಿಯವರೆಗೆ ಸುಮಾರು 8 ಕೀ.ಮೀ ಉದ್ದದ ಕೆಮ್ಮಣ್ಣು ನಾಲೆ 14 ಹಳ್ಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ವ್ಯವಸಾಯಕ್ಕೆ ಅನುಕೂಲ ಕಲ್ಪಿಸಿದೆ. ಆದರೆ ನಿಗದಿತ ಸಮಯಕ್ಕೆ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಈ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಇಂಜಿನಿಯರ್‌ಗಳು, ಅಧಿಕಾರಿಗಳು ನಾಲೆಯ ಮೇಲೆ ಬರುವುದಿಲ್ಲ. ನಾಲೆಯಲ್ಲಿ ಏನೇನು ಸಮಸ್ಯೆಗಳಿವೆ? ನೀರು ಮುಂದೆ ಹೋಗದಿರುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಕ್ರಮ ಕೈಗೊಳ್ಳದ ಪರಿಣಾಮ ಕೆಮ್ಮಣ್ಣು ನಾಲೆಗೆ ಇಂತಹ ದುಸ್ಥಿತಿ ಬಂದಿದೆ. ಮಳೆಗಾಲದಲ್ಲೇ ಬೆಳೆಗಳಿಗೆ ನೀರಿನ ಸಮಸ್ಯೆಯಾದರೆ ಬೇಸಿಗೆ ಕಾಲದಲ್ಲಿ ಏನು ಮಾಡುವುದು ಎಂಬುವುದು ರೈತರ ಪ್ರಶ್ನೆಯಾಗಿದೆ. ಕೊನೇ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯದ ಪರಿಣಾಮ ಭತ್ತ, ರಾಗಿ, ಕಬ್ಬು, ಹಿಪ್ಪುನೇರೆಳೆ ಇನ್ನಿತರರ ಬೆಳೆಗಳಿಗೆ ಮಳೆಗಾಲದಲ್ಲೇ ರೈತರು ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ.

ಗಬ್ಬೆದ್ದು ನಾರುತ್ತಿದೆ: ಕೆಮ್ಮಣ್ಣು ನಾಲೆಯಲ್ಲಿ ನೀರು ಹರಿಯುವಾಗ ಏನೂ ಸಮಸ್ಯೆ ಕಾಣುವುದಿಲ್ಲ. ಆದರೆ, ನೀರು ನಿಂತಾಗ ಹೂಳು, ಗಿಡಗಂಟಿಗಳು, ಕಲುಷಿತ ವಸ್ತುಗಳು ಹಾಗೂ ಪಟ್ಟಣದ ಒಳಚರಂಡಿಯ ನೀರು ಸೇರಿಕೊಂಡು ಗಬ್ಬೆದ್ದು ನಾರುತ್ತದೆ. ಇದರೊಂದಿಗೆ, ಸಾಂಕ್ರಾಮಿಕ ರೋಗಗಳ ಆತಂಕವೂ ಜನರಲ್ಲಿದೆ. ಇದರಿಂದ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಾಲೆಯ ಪಕ್ಕ ಮೂಗು ಹಿಡಿದುಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಸಾರ್ವಜನಿಕರಿಗೆ ಇದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಮ್ಮಣ್ಣು ನಾಲೆಯಲ್ಲಿರುವ ಹೂಳು ಮತ್ತು ಗಿಡಗಂಟಿಗಳನ್ನು ಶೀಘ್ರ ತೆರವುಗೊಳಿಸಿ ಕೊನೆಯ ಭಾಗಕ್ಕೆ ನೀರು ಸಮರ್ಪಕವಾಗಿ ಹರಿಯುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಚ್ಚುಕಟ್ಟು ಪ್ರದೇಶದ ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ನೀರಾವರಿ ನಿಗಮದ ಇಇ ನಾಗರಾಜು ಪ್ರತಿಕ್ರಿಯಿಸಿ, ಕೆಮ್ಮಣ್ಣು ನಾಲೆಯಲ್ಲಿ ನೀರು ಹರಿಯುತ್ತಿರುವುದನ್ನು ಕೂಡಲೇ ನಿಲ್ಲಿಸಿ ಗಿಡಗಂಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಯುವಂತೆ ಕ್ರಮವಹಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net