ದಿನವೂ ಶುಚಿತ್ವಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ

udp-2-malpe
Published on

ಉಡುಪಿ: ನಮ್ಮ ಆರೋಗ್ಯ ಉತ್ತಮವಾಗಿರಬೇಕಾದರೆ ವೈಯಕ್ತಿಕ ಸ್ವಚ್ಛತೆಯೊಂದಿಗೆ ಸುತ್ತಮುತ್ತಲಿನ ಪರಿಸರ ಸೇರಿದಂತೆ ಎಲ್ಲ ರೀತಿಯ ಸ್ವಚ್ಛತೆ ಬಹಳ ಮುಖ್ಯ. ಹೀಗಾಗಿ ದಿನವೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಸಲಹೆ ನೀಡಿದರು.

ಗಾಂಧೀಜಿ ಅವರ ಜನ್ಮದಿನದ ಸ್ಮರಣಾರ್ಥ ಉಡುಪಿ ತಾಲೂಕಿನ ಬಡನಿಡಿಯೂರು ಹಾಗೂ ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಆಸರೆ ಬೀಚ್​ನಲ್ಲಿ ಭಾನುವಾರ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ' ಅಭಿಯಾನದ ನಿಮಿತ್ತ ಹಮ್ಮಿಕೊಂಡಿದ್ದ ಬೃಹತ್​ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್​. ಮಾತನಾಡಿ, ಬೀಚ್​ ಸ್ವಚ್ಛತೆಯ ಶ್ರಮದಾನದಲ್ಲಿ ಅಪಾರ ಪ್ರಮಾಣದ ಕಸವನ್ನು ಸಂಗ್ರಹಿಸಿದ್ದೇವೆ. ಇದಕ್ಕೆಲ್ಲ ಕಾರಣ ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದೇ ಆಗಿದೆ. ಮನೆಯ ಕಸವನ್ನು ಗ್ರಾಮ ಪಂಚಾಯಿತಿಯವರ ವಾಹನಕ್ಕೆ ನೀಡಿದ್ದರೆ ಈ ರೀತಿ ಬೀಚ್​ಗೆ ಬಂದು ಕಸ ಸಂಗ್ರಹಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿನ ಕಸವನ್ನು ವ್ಯವಸ್ಥಿತವಾಗಿಯೇ ವಿಲೇವಾರಿ ಮಾಡಬೇಕು ಎಂದರು.

  • ಪ್ರತಿಜ್ಞಾವಿಧಿ:
    ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಅರುಣ್​ ಕೆ., ಮುಖ್ಯ ಯೋಜನಾಧಿಕಾರಿ ಶೀನಿವಾಸ್​ ರಾವ್​, ಕೆಮ್ಮಣ್ಣು ಗ್ರಾಪಂ ಅಧ್ಯೆ ಕುಸುಮಾ ರವೀಂದ್ರ, ಬಡನಿಡಿಯೂರು ಗ್ರಾಪಂ ಅಧ್ಯೆ ಯಶೋದಾ ಆಚಾರ್ಯ ಹಾಗೂ ಪಿಡಿಒ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net