ಪುಂಡಪೋಕರಿಗಳ ತಾಣವಾದ ದೇಗುಲ, ಗುಮ್ಮಟಗಳು

07 kem 5a
ಕೆಂಭಾವಿಯ ಇತಿಹಾಸ ಪ್ರಸಿದ್ಧ ಭೋಗಣ್ಣ ದೇವಸ್ಥಾನ.
Published on

ವಿಜಯಾಚಾರ್ಯ ಪುರೋಹಿತ ಕೆಂಭಾವಿ: ಸಗರನಾಡಿನ ಅನೇಕ ಸಂತ-ಶರಣರಲ್ಲಿ ಒಬ್ಬರಾದ ಕೆಂಭಾವಿ ಭೋಗಣ್ಣನ ಜನ್ಮಸ್ಥಳದಲ್ಲಿ ಪ್ರಾಚೀನ ಕಾಲದ ಅನೇಕ ದೇಗುಲ, ಗುಮ್ಮಟ, ಶಿಲ್ಪಗಳಿದ್ದರೂ ಸಂಬಂಧಿತರ ನಿರ್ಲಕ್ಷ್ಯ ಮತ್ತು ಅನಾಸಕ್ತಿಯಿಂದಾಗಿ ಪುಂಡ-ಪೋಕರಿಗಳ ತಾಣವಾಗಿ ಮಾರ್ಪಟ್ಟಿವೆ.

ಸುತ್ತಲು ನೀರಿರುವ ಭೋಗೇಶ್ವರ ದೇವಸ್ಥಾನ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಹಿಂದೆ ಈ ಪಟ್ಟಣ ಚಂದೀಮರಸ ಎಂಬ ರಾಜನ ರಾಜಧಾನಿಯಾಗಿತ್ತು. ಅಲ್ಲದೆ ಚಾಲುಕ್ಯರ ಕಾಲದ ಅನೇಕ ಶಿಲಾಯುಗದ ಕೆತ್ತನೆಗಳು ಇಲ್ಲಿನ ರೇವಣಸಿದ್ಧೇಶ್ವರ ದೇವಸ್ಥಾನ ಮತ್ತು ಇತರೆಡೆ ಕಾಣಬಹುದು.

ಇತಿಹಾಸಕಾರರು ಸಂಶೋಧನೆ ಕೈಗೊಂಡು ಪ್ರಾಚೀನ ಶಿಲಾ ಶಾಸನ ಇರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ ಭಾವೈಕ್ಯದ ಸಂಕೇತವಾದ ಹಜರತ್ ಚಚ್ಚಾ ಮಸಾಬಿ ದರ್ಗಾ ಕೂಡ ಪ್ರಸಿದ್ಧಿ ಪಡೆದಿದೆ. ಪುರಾತನ ಶರಣಬಸವೇಶ್ವರ ದೇವಸ್ಥಾನ, ಬಜಾರ್ ಬಲಭೀಸೇನ ದೇವರ, ರೇವಣಸಿದ್ಧೇಶ್ವರ, ಗ್ರಾಮದ ಆರಾಧ್ಯ ದೈವ ತೋಟಮಾನ್ಯ ಮತ್ತು ಮಲ್ಲಯ್ಯ ಸೇರಿ ಅನೇಕ ದೇವಾಲಯ ಮತ್ತು ಮಸೀದಿಗಳು ತನ್ನದೇ ಆದ ಇತಿಹಾಸ ಸಾರುತ್ತವೆ.

ಆದ್ಯ ವಚನಕಾರ ಮುದನೂರಿನ ದೇವರ ದಾಸೀಮಯ್ಯ ಸಮಕಾಲೀನರೆಂದೇ ಹೇಳಲ್ಪಡುವ ಶರಣ ಕೆಂಭಾವಿ ಭೋಗಣ್ಣ ಸಮಾಜದ ಪರಿವರ್ತನೆಗೆ ಅನೇಕ ಮಾರ್ಗೋಪಾಯ ಕಂಡುಹಿಡಿದವರು. ಹಿಂದೆ ಭೋಗಣ್ಣನು ಗ್ರಾಮ ತೊರೆಯುವಾಗ ಊರಲ್ಲಿರುವ ಎಲ್ಲ ಲಿಂಗಗಳು ಅವನ ಬೆನ್ನುಹತ್ತಿ ಹೋಗಿದ್ದವು. ಮರುದಿನ ಶಿವಾಲಯಗಳಿಗೆ ಪೂಜೆ ಸಲ್ಲಿಸಲು ತೆರಳಿದ ಪೂಜಾರಿಗಳಿಗೆ ಲಿಂಗಗಳು ಇಲ್ಲದ್ದನ್ನು ಕಂಡು ದಿಗ್ಭ್ರಮೆಗೊಂಡರು. ನಂತರ ಭೋಗಣ್ಣನಿಗೆ ಕ್ಷಮೆ ಕೋರಿ ಮರಳಿ ಗ್ರಾಮಕ್ಕೆ ಬರುವಂತೆ ಪ್ರಾರ್ಥಿಸಿದಾಗ ಭೋಗಣ್ಣನ ಜತೆ ಲಿಂಗಗಳು ನಾ ಮುಂದು ತಾ ಮುಂದು ಎನ್ನುವಂತೆ ಬಂದು ಸಣ್ಣ ಪೀಠದಲ್ಲಿ ದೊಡ್ಡ ಲಿಂಗ, ದೊಡ್ಡ ಪೀಠದಲ್ಲಿ ಸಣ್ಣ ಲಿಂಗ ಕೂತಿವೆ ಎಂಬುದನ್ನು ಇಂದಿಗೂ ಇಲ್ಲಿನ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಕಾಣಬಹುದು.

ಕೆಂಭಾವಿ ಹಿಂದು-ಮುಸ್ಲಿಮರ ಭಾವೈಕ್ಯದ ಗ್ರಾಮ. ಹಜರತ್ ಚಚ್ಚಾ ಮಸಾಬಿ ಜಾತ್ರೆ ವೇಳೆ ಊರಿನ ಎಲ್ಲ ಪ್ರಮುಖ ವತನದಾರರಾದ ಖಾಜಿ, ಗೌಡರು, ಕುಲಕರ್ಣಿ, ದೇಶಪಾಡೆ ಮನೆತನದವರು ಪೂಜೆ ಸಲ್ಲಿಸುತ್ತಾರೆ.

ವಿಜಯಪುರದ ಆದಿಲ್ ಶಾಹಿ ಕಾಲದ ಮೂರು ಪ್ರಮುಖ ಗುಮ್ಮಟಗಳು ಸಹ ಗ್ರಾಮದಲ್ಲಿವೆ. ದೊಡ್ಡ ಗುಮ್ಮಟದ ಪಕ್ಕದಲ್ಲಿ ಎಂಟು ಮೂಲೆಯುಳ್ಳ ಬಾವಿ ಮತ್ತು ಒಂದೇ ಕಲ್ಲಿನಲ್ಲಿ ನಿರ್ಮಿತವಾದ ಗೋರಿ ಇದೆ. ಈ ಗುಮ್ಮಟಗಳ ಪೂರ್ಣ ಪ್ರಮಾಣದ ಇತಿಹಾಸದ ಬಗ್ಗೆ ಮಾಹಿತಿ ಇಲ್ಲವಾಗಿದ್ದರಿಂದ ಹಾಳು ಬಿದ್ದಿವೆ. ಪುರಾತತ್ವ ಇಲಾಖೆ ಗಮನಹರಿಸದ್ದರಿಂದ ಈ ಎಲ್ಲ ಗುಮ್ಮಟಗಳು ಹಾಳಾಗಿದ್ದಲ್ಲದೆ ಪುಂಡಪೋಕರಿಗಳ ತಾಣವಾಗಿ ಮಾರ್ಪಟ್ಟಿವೆ.

ಒಟ್ಟಾರೆ, ಇತಿಹಾಸ ಸಾರಿ ಹೇಳುವ ದೇವಸ್ಥಾನ, ಶಾಸನ, ಗೋರಿ, ಶಿಲ್ಪ, ಗುಮ್ಮಟಗಳನ್ನು ಸಂರಕ್ಷಿಸಿ ಜೀಣೋದ್ಧಾರಗೊಳಿಸಿ ಪ್ರವಾಸಿ ತಾಣವನ್ನಾಗಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಭೋಗಣ್ಣನ ಜನ್ಮಸ್ಥಳ ಕೆಂಭಾವಿ ಇತಿಹಾಸಪ್ರಸಿದ್ಧ ಪಟ್ಟಣವಾಗಿದೆ. ಇಲ್ಲಿನ ಇತಿಹಾಸ ಸಾರುವ ಅನೇಕ ಶಿಲಾ ಶಾಸನಗಳು, ಗುಮ್ಮಟಗಳು, ದೇವಸ್ಥಾನಗಳನ್ನು ರಕ್ಷಿಸುವ ಮೂಲಕ ಪ್ರವಾಸಿ ತಾಣವಾಗಿ ಮಾಡಬೇಕಾಗಿದೆ.
| ನಿಂಗನಗೌಡ (ಹನಿ) ದೇಸಾಯಿ ಇತಿಹಾಸ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net