ಮಲ್ಲಾ(ಬಿ)ಗೆ ಅಧಿಕಾರಿಗಳ ತಂಡ ಭೇಟಿ

19 kem 2
ಮಲ್ಲಾ (ಬಿ) ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಬುಧವಾರ ಗ್ರಾಮಸ್ಥರು ಸಚಿವ ದರ್ಶನಾಪುರ ಅವರಿಗೆ ಖಾಲಿ ಕೊಡಗಳ ಮೂಲಕ ಘೇರಾವ್ ಹಾಕಿದ್ದರ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇಒ ಬಸವರಾಜ ಸಜ್ಜನ್, ಎಇಇ ವಿ.ಎನ್.ಪಾಟೀಲ್, ಸ್ಪೂರ್ತಿ, ಮಲ್ಲನಗೌಡ ಪಾಟೀಲ್ ಇತರರಿದ್ದರು.
Published on

ಕೆಂಭಾವಿ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೆ ಮಲ್ಲಾ(ಬಿ) ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಖಾಲಿ ಕೊಡಗಳೊಂದಿಗೆ ಬುಧವಾರ ಘೇರಾವ್ ಹಾಕಿದ್ದರ ಬೆನ್ನಲ್ಲೆ ಅಧಿಕಾರಿಗಳ ತಂಡ ಗುರುವಾರ ಭೇಟಿ ನಿಡಿ ಪರಿಶೀಲಿಸಿತು.

ಈಗಾಗಲೇ ಗ್ರಾಮದಲ್ಲಿರುವ ಕೊಳವೆ ಬಾವಿಗಳು ಬತ್ತಿ ಹೋಗಿದ್ದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಹೀಗಾಗಿ ಇದನ್ನು ಅರಿತ ಗ್ರಾಮಸ್ಥರು ಸಚಿವರಿಗೆ ಘೇರಾವ್ ಹಾಕಿ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದರು.

ಸಚಿವರ ಸೂಚನೆ ಮೇರೆಗೆ ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಇಂಜಿನಿಯರ್ ವಿ.ಎನ್.ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀರಿನ ಹಲವು ಮೂಲಗಳನ್ನು ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ತಾಪಂ ಇಒ, ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಕೊಳವೆ ಬಾವಿಯನ್ನು ದಾನದ ರೂಪದಲ್ಲಿ ಗ್ರಾಪಂಗೆ ನೀಡಲು ಮುಂದಾಗಿದ್ದು, ಅದನ್ನು ಪಡೆದು ಓವರ್ ಹೆಡ್ ಟ್ಯಾಂಕ್ ಮೂಲಕ ನೀರಿನ ಸಮಸ್ಯೆ ಇರುವ ಬಡಾವಣೆಗಳಿಗೆ ತುರ್ತಾಗಿ ನೀರು ಒದಗಿಸಲಾಗುವುದು. ನಂತರ ಇನ್ನೆರಡು ದಿನಗಳಲ್ಲಿ ನೀರಿನ ಮೂಲ ಶೋಧನೆ ಮಾಡಿ ಹೆಚ್ಚಿನ ಕೊಳವೆ ಬಾವಿ ಹಾಕಿಸಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ರೇಣುಕಾ, ಕಾರ್ಯದರ್ಶಿ ಮಲ್ಲನಗೌಡ ಪಾಟೀಲ್, ಜೆಇ ಸ್ಪೂರ್ತಿ, ಶಿವಪ್ಪ ದೊರೆ, ಸುಭಾಷಗೌಡ ಪಾಟೀಲ್, ಬಸಣ್ಣ ದೊರೆ, ದ್ಯಾವಪ್ಪ ದೊರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net