ಕೆಂಭಾವಿಯಲ್ಲಿ ಮನೆ ಮನೆಗೆ ತೆರಳಿ ಆರತಿ

12 kem 1b
ನರಕ ಚತುರ್ದಶಿ ನಿಮಿತ್ತ ಭಾನುವಾರ ನಸುಕಿನ ಜಾವ ಕೆಂಭಾವಿಯಲ್ಲಿ ಮನೆಮನೆಗೆ ತೆರಳಿ ಆರತಿ ಬೆಳಗಿಸಿಕೊಳ್ಳುತ್ತಿರುವುದು.
Published on

ಕೆಂಭಾವಿ: ಬೆಳಕಿನ ಹಬ್ಬ ದೀಪಾವಳಿಯ ಮೊದಲ ದಿನವಾದ ಭಾನುವಾರ ನರಕ ಚತುರ್ದಶಿಯನ್ನು ಪಟ್ಟಣದ ಜನತೆ ಸಡಗರ ಸಂಭ್ರಮದಿಂದ ಆಚರಿಸಿದರು.

ಸಂಪ್ರದಾಯದಂತೆ ಬೆಳಗಿನ ಜಾವ ಹೊಸ ಬಟ್ಟೆಗಳನ್ನುಟ್ಟು ಜನತೆ ಮನೆ ಮನೆಗೆ ತೆರಳಿ ಆರತಿ ಬೆಳಗಿಸಿಕೊಳ್ಳುವುದರ ಮೂಲಕ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಅನೇಕ ವರ್ಷಗಳಿಂದ ಈ ವಿಶೇಷಾಚರಣೆ ಸಂಪ್ರದಾಯದಂತೆ ಜರುಗುತ್ತಿರುವ ಈ ಆರತಿ ಉತ್ಸವ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಸುಮಂಗಲೆಯರಿಂದ ಹಣೆಗೆ ತಿಲಕವಿಟ್ಟು ಆರತಿ ಬೆಳಗಿಸಿ ನಂತರ ಅಭ್ಯಂಗ ಸ್ನಾನ ಮಾಡುವ ಮೂಲಕ ಜನರು ಹಬ್ಬವನ್ನು ಆಚರಿಸುತ್ತಾರೆ. ದೊಡ್ಡವರು ಹೊಸ ಬಟ್ಟೆಗಳನ್ನುತೊಟ್ಟು ಸಂಭ್ರಮಸಿದರೆ ಮಕ್ಕಳು ಪಟಾಕಿ ಸಿಡಿಸಿ ಹಬ್ಬದ ಸಂಭ್ರಮ ಆಚರಿಸಿದರು.

ಖರೀದಿ ಜೋರು: ಪಟ್ಟಣದ ಮುಖ್ಯ ಬಜಾರ, ಹಳೇ ಬಸ್ ನಿಲ್ದಾಣದ ಮಾರ್ಕೇಟ್, ಸಂಜೀವನಗರ ಕಾಲುವೆ ಬ್ರಿಜ್ ಮಾರ್ಕೇಟ್ ಸೇರಿ ಹಲವೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೂ, ಹಣ್ಣು, ಕುಂಬಳಕಾಯಿ, ತಳಿರು ತೋರಣ ಹಾಗೂ ಪೂಜಾ ಸಾಮಗ್ರಿ ಖರೀದಿಯಲ್ಲಿ ಜನರು ನಿರತರಾಗಿದ್ದಾರೆ. ಐದು ದಿನಗಳ ನಡೆಯುವ ಈ ಹಬ್ಬವನ್ನು ಜನತೆ ವಿಶಿಷ್ಠ ರೀತಿಯಲ್ಲಿ ಆಚರಿಸುತ್ತಿದ್ದು, ವ್ಯಾಪಾರಸ್ಥರು ತಮ್ಮ ಅಂಗಡಿಗಳ ಪೂಜೆಗೆ ಪೂಜಾ ಸಾಮಗ್ರಿ ಖರೀದಿಯಲ್ಲಿ ನಿರತರಾದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net