ಕಲುಷಿತ ನೀರಿನಿಂದ ೫೦ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

30 kem 1a
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಯಕ್ತಾಪುರ ಕಸ್ತೂರಬಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಹಾಗೂ ಜಿಪಂ ಸಿಇಒ ಗರೀಮಾ ಪನ್ವಾರ್ ನಿಲಯಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ, ಡಿಡಿಪಿಐ ಎಚ್.ಟಿ.ಮಂಜುನಾಥ, ತಹಸೀಲ್ದಾರ್ ವಿಜಯಕುಮಾರ, ಇಒ ಬಸವರಾಜ ಸಜ್ಜನ್ ಇತರರಿದ್ದರು.
Published on

ಕೆಂಭಾವಿ: ಕಲುಷಿತ ನೀರು ಸೇವಿಸಿ ೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ಶನಿವಾರ ನಡೆದಿದೆ.

ಶಿಕ್ಷಣ ಇಲಾಖೆಯ ಕಸ್ತೂರಬಾ ವಸತಿ ನಿಲಯದ ೧೦೦ ವಿದ್ಯಾರ್ಥಿನಿಯರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಓದುತ್ತಿದ್ದು, ಬೆಳಗ್ಗೆ ನೀರು, ಬಿಸ್ಕಿಟ್ ಹಾಗೂ ಚಹಾ ಸೇವಿಸಿ ಶಾಲೆಗೆ ಹೋದ ಐದಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಲೆಸುತ್ತು ಬಂದು ಬಿದ್ದಿದ್ದಾರೆ.

ಮುಖ್ಯಗುರು ಮತ್ತು ವಸತಿ ನಿಲಯದ ಮೇಲ್ವಿಚಾರಕರು ಯಕ್ತಾಪುರ ಪ್ರಾಥಮಿಕ ಮತ್ತು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇದರಿಂದ ವಿದ್ಯಾರ್ಥಿನಿಯರು ಚೇತರಿಸಿಕೊಂಡು ವಸತಿ ನಿಲಯಕ್ಕೆ ತೆರಳಿದ್ದಾರೆ. ಇದರಲ್ಲಿ ಇನ್ನೂ ಕೆಲ ವಿದ್ಯಾರ್ಥಿನಿಯರು ಎರಡೂ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಧಿಕಾರಿ, ಎಸ್ಪಿ, ಸಿಇಒ ಭೇಟಿ: ವಿಷಯ ತಿಳಿಯುತ್ತಲೇ ಯಕ್ತಾಪುರಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಸುಶೀಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಹಾಗೂ ಜಿಪಂ ಸಿಇಒ ಗರೀಮಾ ಪನ್ವಾರ್ ಅವರು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಮತ್ತು ನಿಲಯದ ಮೇಲ್ವಿಚಾರಕರಿಂದ ಮಾಹಿತಿ ಕಲೆ ಹಾಕಿದರು. ನಂತರ ಅಡುಗೆ ಕೋಣೆ, ನೀರು ಶೇಖರಣೆ ಸ್ಥಳ, ಶೌಚಗೃಹ ಸೇರಿ ಹಲವು ಸ್ಥಳಗಳನ್ನು ಖುದ್ದಾಗಿ ಪರಿಶೀಲಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಸತಿ ನಿಲಯಕ್ಕೆ ನೀರು ಒದಗಿಸುವ ತೆರೆದ ಬಾವಿ ನೀರನ್ನು ಪರೀಕ್ಷಗೊಳಪಡಿಸುವಂತೆ ಪಿಡಿಒ ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ನಂತರ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾದ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಪ್ರಾಣಹಾನಿ ಇಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ, ಡಿಡಿಪಿಐ ಎಚ್.ಟಿ.ಮಂಜುನಾಥ, ತಹಸೀಲ್ದಾರ್ ವಿಜಯಕುಮಾರ, ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ.ಆರ್.ವಿ.ನಾಯಕ, ಬಿಇಒ ವಸಂತ ಶಹಾಬಾದಕರ್, ವೈದ್ಯಾಧಿಕಾರಿ ಡಾ.ಗಿರೀಶ, ಡಾ.ಸಂಜಯ ಇದ್ದರು.

ವಾರಕ್ಕೊಮ್ಮೆ ಸ್ನಾನ: ವಸತಿ ನಿಲಯದಲ್ಲಿ ನೀರಿನ ಸಮಸ್ಯೆಯಿಂದ ಎಲ್ಲ ವಿದ್ಯಾರ್ಥಿನಿಯರು ವಾರದಲ್ಲಿ ಒಂದು ಬಾರಿ ಸ್ನಾನ ಮಾಡುವುದಾಗಿ ಹೇಳಿದ ವಿದ್ಯಾರ್ಥಿನಿಯ ಮಾತು ಕೇಳಿ ಜಿಲ್ಲಾಧಿಕಾರಿ ಡಾ.ಸುಶೀಲಾ ಮತ್ತು ಜಿಪಂ ಇಸಿಒ ಗರೀಮಾ ಪನ್ವಾರ್ ಒಂದು ಕ್ಷಣ ದಂಗಾದರು. ಶುಚಿತ್ವ ಕಾಪಾಡುವುದಕ್ಕಾಗಿ ಕಡ್ಡಾಯವಾಗಿ ನಿತ್ಯ ಸ್ನಾನ ಮಾಡಬೇಕು. ಈ ಬಗ್ಗೆ ಶೀಘ್ರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.


ಖಾಲಿ ಹೊಟ್ಟೆಯಲ್ಲಿ ವಿದ್ಯಾರ್ಥಿನಿಯರು ಬೆಳಗ್ಗೆ ಚಹಾ-ಬಿಸ್ಕಿಟ್ ಸೇವಿಸಿ ಶಾಲೆಗೆ ತೆರಳಿದ್ದರಿಂದ ಆಸಿಡಿಟಿ ಆಗಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಕ್ರಮ ಕೈಗೊಂಡು ನೀರು ಒದಗಿಸಲಾಗುವುದು. ಕೆಟ್ಟು ಹೋದ ಶುದ್ಧ ಕುಡಿಯುವ ನೀರಿನ ಘಟಕ ಶೀಘ್ರ ಆರಂಭಿಸಲಾಗುವುದು.
| ಡಾ. ಸುಶೀಲಾ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net