ಐದು ದಿನ ಪೂರೈಸಿದ ಗ್ರಾಮಆಡಳಿತಾಧಿಕಾರಿಗಳ ಧರಣಿ

15 HRR
Published on

ಹರಿಹರ: ವೇಥನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಆರಂಭಿಸಿರುವ 2ನೇ ಹಂತದ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ 5ನೇ ಪೂರೈಸಿತು.

ಈ ವೇಳೆ ಮಾತನಾಡಿದ ಗ್ರಾಮ ಆಡಳಿತಾಧಿಕಾರಿ ನೌಕರರ ಸಂಘದ ಮುಖಂಡರು ಕಳೆದ ಸಲ ಮುಷ್ಕರ ನಡೆಸಿದಾಗ 8 ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಸರ್ಕಾರ ಮಾತು ತಪ್ಪಿದೆ ಎಂದು ದೂರಿದರು.

ಸುಸಜ್ಜಿತ ಕಚೇರಿ, ಮೂಲ ಸೌಕರ್ಯ ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಕೋರಲಾಗಿದೆ.ಜನರ ಸೇವೆ ಸಲ್ಲಿಸುವವರಿಗೆ ಸೂಕ್ತ ಪರಿಕರ, ಸೌಲಭ್ಯ ಇಲ್ಲದಿದ್ದರೆ ಸರ್ಕಾರದ ಆಶಯ ಈಡೇರುವುದು ಕಷ್ಟ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಶುಕ್ರವಾರ ಧರಣಿ ನಿರತ ಆಡಳಿತ ಅಧಿಕಾರಿಗಳ ತಂಡವನ್ನು ಭೇಟಿ ಮಾಡಿ ಬೆಂಬಲ ಸೂಚಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳನ್ನು ತಲುಪಿಸಲು ಪ್ರಮುಖ ಪಾತ್ರ ವಹಿಸುವ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕು ಎಂದರು.

ಸಚಿವರು, ಶಾಸಕರು ಸಿಎಂ-ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿಕೆ ನೀಡುವುದರಲ್ಲಿ ತಲ್ಲೀನರಾಗಿ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ ಕಡೆಗಣಿಸಿದ್ದಾರೆ ಎಂದು ಆಕ್ಷೇಪಿಸಿದರು.

ಗ್ರಾಮ ಆಡಳಿತಾಧಿಕಾರಿ ನೌಕರರ ಸಂಘದ ಅಧ್ಯಕ್ಷ ಹೇಮಂತಕುಮಾರ್, ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, ಖಜಾಂಚಿ ಸೌಮ್ಯಾ ಮಲ್ಲಿಕಾರ್ಜುನ, ಮಾರುತಿ, ಶಿವಪ್ರಕಾಶ್, ಹರೀಶ್, ಬೋರಯ್ಯ, ಪುಷ್ಪಾ ದೊಡ್ಡಮನಿ, ಅನ್ನಪೂರ್ಣ, ನವೀನ ಕಟ್ಟೇರ, ರೇಖಾ ಇತರರಿದ್ದರು.

ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಕೆಲ ಮುಖಂಡರು ಹರಿಹರಕ್ಕೆ ವೈದ್ಯಕೀಯ ಕಾಲೇಜು ಕೋರಿ ಹೋರಾಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಹೋರಾಟ ನಡೆಸಲು ಯಾವ ನಾಯಕರೂ ಏಕೆ ಮುಂದೆ ಬರುತ್ತಿಲ್ಲ? ಮೂಲೆ ಸೇರಿದರೋ ಅಥವಾ ಮೆಡಿಕಲ್ ಕಾಲೇಜ್ ಬೇಡವಾಯಿತೋ? ಸ್ಪಷ್ಟಪಡಿಸಬೇಕು. | ಎಸ್.ಎಂ.ವೀರೇಶ್ ಹನಗವಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net