ಕೆಳದಿ ರಾಜಗುರು ಪರಂಪರೆಗಿದೆ ಸುದೀರ್ಘ ಇತಿಹಾಸ

16 RPT 1
ಕವಲೇದುರ್ಗದಲ್ಲಿ ಶ್ರೀ ಮರಳಸಿದ್ಧ ಶಿವಯೋಗ ಮಂದಿರ ಬ್ರಹ್ಮಕಲಶಾರೋಹಣಾ ಧರ್ಮ ಸಮಾರಂಭವನ್ನು ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು. ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಮರುಳಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಆರಗ ಜ್ಞಾನೇಂದ್ರ ಇತರರಿದ್ದರು.
Published on

ರಿಪ್ಪನ್‌ಪೇಟೆ: ಭಾರತಾದ್ಯಂತ ಹಲವು ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದರಲ್ಲಿ ಕೆಳದಿ ಅರಸರ ಪರಂಪರೆ ಮತ್ತು ರಾಜಗುರು ಪರಂಪರೆ ಎರಡೂ ಸುದೀರ್ಘ ಇತಿಹಾಸ ಹೊಂದಿವೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಸಮೀಪದ ಕವಲೇದುರ್ಗದ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಮರುಳಸಿದ್ದೇಶ್ವರ ಶಿವಯೋಗ ಮಂದಿರ, ಸಭಾಭವನದ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕೆಳದಿ ಅರಸರು ಧರ್ಮ ಮತ್ತು ಪರಂಪರೆಯ ಮೇಲೆ ಶ್ರದ್ಧೆ ಹೊಂದಿದ್ದರು. ಕೆಳದಿ ಇತಿಹಾಸ ತಿಳಿಸುವ ಶಿವತತ್ವ ರತ್ನಾಕರ ಗ್ರಂಥದಲ್ಲಿ ಶಿವಪ್ಪ ನಾಯಕರ ಪಟ್ಟಾಭಿಷೇಕದಲ್ಲಿ ಉಜ್ಜಯಿನಿ ಪೀಠದ ಜಗದ್ಗುರುಗಳು ಪಾಲ್ಗೊಂಡಿದ್ದರ ಬಗ್ಗೆ ಉಲ್ಲೇಖವಿದೆ. ಉಜ್ಜಯಿನಿ ಪೀಠದ ಜತೆಗೆ ಉತ್ತಮ ಧಾರ್ಮಿಕ ಸಂಬಂಧ ಹೊಂದಿದ್ದ ಕೆಳದಿ ಅರಸರು, ಉಜ್ಜಯಿನಿ ಪೀಠದ ಶಾಖಾ ಮಠವಾಗಿದ್ದ ಕವಲೇದುರ್ಗವನ್ನು ರಾಜಗುರು ಮಠವನ್ನಾಗಿ ಮಾಡಿಕೊಂಡಿದ್ದರು ಎಂದರು.
ಕವಲೇದುರ್ಗದ ಕರ್ತೃ ಶ್ರೀಗುರು ಮರುಳಸಿದ್ದೇಶ್ವರರ ತಪಸ್ಸಿನ ಶಕ್ತಿ ಈ ಮಠದ ಶಕ್ತಿಯನ್ನು ಹೆಚ್ಚಿಸಿದೆ. ಕೆಳದಿ ಚನ್ನಮ್ಮನಿಗೆ ಪಟ್ಟಾಭಿಷೇಕ ಮಾಡಿ ಮಾರ್ಗದರ್ಶನ ಮಾಡಿದ್ದರಿಂದ ಚನ್ನಮ್ಮ ಶಿವಾಜಿ ಪುತ್ರ ರಾಜಾರಾಮನಿಗೆ ಆಶ್ರಯ ನೀಡಿ, ದೆಹಲಿ ಸುಲ್ತಾನ ಔರಂಗಜೇಬ್ ಸೈನ್ಯವನ್ನು ಹಿಮ್ಮೆಟ್ಟಿಸಿ ಇತಿಹಾಸದಲ್ಲಿ ದಾಖಲಾಗಿದ್ದಾಳೆ ಎಂದು ತಿಳಿಸಿದರು.
ಇಂದು ಕೆಳದಿ ಅರಸರ ಅರಮನೆ ನಾಶವಾಗಿದ್ದರೂ ಗುರುಮನೆ ಉಳಿದಿದೆ. ಇಂದಿಗೂ ಮಲೆನಾಡಿನ ಭಕ್ತರಿಗೆ ಧಾರ್ಮಿಕ ಸಂಸ್ಕಾರ ನೀಡುತ್ತಿದೆ. ಶ್ರೀ ಮಠದ ಲಿಂಗೈಕ್ಯ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕೆಳದಿ ಪರಂಪರೆಗೆ ಹೊಸ ಕಾಯಕಲ್ಪ ನೀಡಿ ಲುಪ್ತವಾಗಿದ್ದ ಶ್ರೀಮಂತ ಇತಿಹಾಸವನ್ನು ಹೊರ ತೆಗೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆ, ಕಾರ್ಯಾಗಾರ, ಗ್ರಂಥ ಪ್ರಕಟಣೆಯ ಮೂಲಕ ಮಠ ಮತ್ತು ಕೆಳದಿ ಇತಿಹಾಸಕ್ಕೆ ಮನ್ನಣೆ ತಂದು ಕೊಟ್ಟಿದ್ದಾರೆ ಎಂದು ವಿವರಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಮೂರು ವೀರಶೈವ ಮಠಗಳಿದ್ದು, ಅವುಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡಿ ಕವಲೇದುರ್ಗವನ್ನು ಪ್ರೇಕ್ಷಣೀಯ ತಾಣವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತ ಪ್ರಶಾಂತ್ ರಿಪ್ಪನ್‌ಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಳಲಿಮಠದ ಡಾ. ಶ್ರೀ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿಯ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಮರುಳಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉದ್ಯಮಿಗಳಾದ ಕೋಣಂದೂರು ಪ್ರಕಾಶ್, ಕಟ್ಟೆಗದ್ದೆ ಹಾಲಪ್ಪಗೌಡ ಇತರರಿದ್ದರು.

ಪ್ರೇಕ್ಷಣೀಯ ಕ್ಷೇತ್ರವಾಗಿ ಅಭಿವೃದ್ಧಿ
ಧರ್ಮ ಉಳಿಯಲು ಮಠಗಳು ಪ್ರಮುಖವಾಗಬೇಕು. ಕವಲೇದುರ್ಗ ಕೋಟೆ ಮತ್ತು ಭುವನಗಿರಿ ಮಠ ಪೀಠವನ್ನು ರಾಜ್ಯದಲ್ಲಿ ಉತ್ತಮ ಪ್ರೇಕ್ಷಣೀಯ ಯಾತ್ರಾ ಕ್ಷೇತ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಪುರಾತತ್ವ ಇಲಾಖೆಯಿಂದ ಹೆಚ್ಚಿನ ಅನುದಾನವನ್ನು ತರುವ ಸಂಕಲ್ಪ ನನ್ನದಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಈಗಾಗಲೇ ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಕೊಡಚಾದ್ರಿಯ ಅಭಿವೃದ್ಧಿಗಾಗಿ ಅನುದಾನವನ್ನು ತರಲಾಗಿದ್ದು, ರೂಪ್‌ವೇಗೆ ಸಿದ್ಧತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬೈಂದೂರು ಬಳಿ ನೌಕಾಯಾನ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net