ಮಾ.4ರಂದು ರಾಜ್ಯಕ್ಕೆ ಕೇಜ್ರಿವಾಲ್ ಆಗಮನ: ಆಪ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾಹಿತಿ

MUKYAMANTI CHANDRU
Published on

ಕೊಪ್ಪಳ: ರಾಜ್ಯದ ಜನರು ಜೆಸಿಬಿ ಪಕ್ಷಗಳ ದುರಾಡಳಿತಕ್ಕೆ ಬೇಸತ್ತಿದ್ದು, ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವಾದ ಮಾಡುವ ಭರವಸೆ ಇದೆ. ಮಾ.4ರಂದು ದಾವಣಗೆರೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಗಮಿಸಲಿದ್ದು ಸಾವಿರಾರು ಕಾರ್ಯಕರ್ತರು ಸೇರಲಿದ್ದಾರೆಂದು ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೆಹಲಿ ಹಾಗೂ ಪಂಜಾಬ್‌ನಲ್ಲಿ ಎಎಪಿ ನುಡಿದಂತೆ ನಡೆದಿದೆ. ಭ್ರಷ್ಟಾಚಾರ ಮುಕ್ತ ಆಡಳಿತ, ಆರೋಗ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲೂ ಮಾದರಿ ಆಡಳಿತ ನಡೆಸಲಿದ್ದೇವೆ. ಹೀಗಾಗಿ ನಮಗೆ ಆಶೀರ್ವಾದ ಮಾಡುವಂತೆ ಮತದಾರರ ಬಳಿ ಮನವಿ ಮಾಡಲಿದ್ದೇವೆ. ಎಲ್ಲ ಪಕ್ಷಗಳು ಚುನಾವಣೆ ಸಮಯದಲ್ಲಿ ಪ್ರಣಾಳಿಕೆ ನೀಡುತ್ತವೆ. ಅಧಿಕಾರಕ್ಕೆ ಬಂದ ನಂತರ ಈಡೇರಿಸುವುದಿಲ್ಲ. ರಾಜ್ಯದಲ್ಲಿ ದುರಾಡಳಿತ, ಬೊಗಳೆ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಕೀಲುಗೊಂಬೆಯಂತಾಗಿದ್ದಾರೆ. ಅಧಿಕಾರಕ್ಕಾಗಿ ರಾಜಿಯಾಗಿದ್ದು, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಮಾ.4ರಂದು ದಾವಣಗೆರೆ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 50 ಸಾವಿರ ಜನ ಸೇರಲಿದ್ದು, ಪಂಜಾಬ್ ಸಿಎಂ ಭಗವಂತ ಸಿಂಗ್ ಸಹ ಆಗಮಿಸುವರು ಎಂದರು.


ರಾಜ್ಯ ಕಾರ್ಯದರ್ಶಿ ಶಿವಪ್ಪ ಜೋಗಿನ್ ಮಾತನಾಡಿ, ರಾಜ್ಯದ ಜನ ಬದಲಾವಣೆಗಾಗಿ ಸಜ್ಜಾಗಿದ್ದಾರೆ. ದೇಶದ ಜನರಲ್ಲಿ ಅರವಿಂದ ಕೇಜ್ರಿವಾಲ್ ಹೊಸ ಭರವಸೆ ಮೂಡಿಸಿದ್ದು, ದೆಹಲಿಯಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದಲ್ಲೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ರಾಜ್ಯ ಮೂಲೆ ಮೂಲೆಯಿಂದ ದಾವಣರೆಗೆ ಕಾರ್ಯಕ್ರಮಕ್ಕೆ ಮುಂಚೂಣಿ ಕಾರ್ಯಕರ್ತರು ಆಗಮಿಸಲಿದ್ದಾರೆ. 25 ಸಾವಿರ ಕಾರ್ಯಕರ್ತರು ಅಂದು ಪಕ್ಷಕ್ಕಾಗಿ ತನು-ಮನದಿಂದ ದುಡಿವ ಬಗ್ಗೆ ಪ್ರತಿಜ್ಞಾ ವಿಧಿ ಸ್ವಿಕರಿಸಲಿದ್ದಾರೆ. ಕೊಪ್ಪಳ ಜಿಲ್ಲೆಯಿಂದಲೂ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದರು. ಪಕ್ಷದ ಪದಾಧಿಕಾರಿಗಳಾದ ರುದ್ರಯ್ಯ ನವಲಿ ಹಿರೇಮಠ, ಲೋಹಿತ್, ಹುಸೇನ್‌ಸಾಬ್ ಗಂಗನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net