

ಮುಳ್ಳೇರಿಯ: ಯಕ್ಷಗಾನದಲ್ಲಿ ಪ್ರಸಂಗದ ಜತೆಗೆ ಪ್ರಸಂಗಕರ್ತರ ಹೆಸರನ್ನೂ ಹೇಳಬೇಕು. ಇದು ಕೃತಿಕಾರರಿಗೆ ಹಾಗೂ ಅವರ ಪರಿಶ್ರಮಕ್ಕೆ ನೀಡುವ ಗೌರವ. ಯಕ್ಷಗಾನದ ಪುನಶ್ಚೇತನಕ್ಕೆ ಮಾಸ್ತರ್ ವಿಷ್ಣು ಭಟ್ಟರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಮುಖ್ಯಶಿಕ್ಷಕ ಡಿ.ರಾಮಣ್ಣ ಮಾಸ್ತರ್ ಹೇಳಿದರು.
ಕೇರಳ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಕೇರಳ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಹಾಗೂ ಬನಾರಿ ಕೀರಿಕ್ಕಾಡು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು-ಬರಹದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯ, ಸಾಹಿತಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ದ್ವಾರಕಾ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿದ್ದರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಸ್ಥಾಪಕ ಸಂಚಾಲಕ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಪರಿಷತ್‌ನ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಹಾಗೂ ಡಾ.ಶಾಂತ ಪುತ್ತೂರು ಶುಭ ಹಾರೈಸಿದರು. ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಹಾಗೂ ಭಗವದ್ಗೀತಾ ಪಾರಾಯಣ ನಡೆಯಿತು.
ಶಿಕ್ಷಕಿ ಜಲಜಾಕ್ಷಿ ರೈ ಸ್ವಾಗತಿಸಿದರು. ಯಮಿತಾ, ಅರ್ಚನಾ, ತೇಜಸ್ವಿ ಹಾಗೂ ಸ್ವಾತಿ ಪ್ರಾರ್ಥಿಸಿದರು. ವಸಂತ ಕೆರೆಮನೆ ವಂದಿಸಿದರು. ಅಪೂರ್ವ ಕಾರಂತ ಪುತ್ತೂರು ನಿರೂಪಿಸಿದರು.
ಕವಿಗೋಷ್ಠಿ, ಭಾವಭಕ್ತಿ ಗಾಯನ
ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. 25 ಮಂದಿ ಕವಿಗಳು ಚುಟುಕು ವಾಚನ ಮಾಡಿದರು. ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ, ಅಪೂರ್ವ ಕಾರಂತ, ಆದ್ಯಂತ್ ಅಡೂರು ಹಾಗೂ ಗಿರೀಶ್ ಪೆರಿಯಡ್ಕ ಅವರಿಂದ ಭಾವಭಕ್ತಿ ಗಾಯನ ನಡೆಯಿತು. ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಕಾರ್ಯದರ್ಶಿಯಾಗಿ ಅಪೂರ್ವ ಕಾರಂತ ಆಯ್ಕೆಯಾದರು.