ಯಳಂದೂರು ತಾಲೂಕು ಮೈದಾನ ಸುಸಜ್ಜಿತವಾಗಿಟ್ಟುಕೊಳ್ಳಿ

30 yelandur 01
Published on

ಯಳಂದೂರು: ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣವಿಲ್ಲ, ಇರುವ ಪದವಿ ಪೂರ್ವ ಕಾಲೇಜಿನ ಮೈದಾನವನ್ನು ಸುಸಜ್ಜಿತವಾಗಿಟ್ಟುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶನಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಟ್ಟಣದಲ್ಲಿ ಕ್ರೀಡಾಂಗಣವಿಲ್ಲ. ಇರುವ ಮೈದಾನವನ್ನು ಸುಸಜ್ಜಿತವಾಗಿಟ್ಟುಕೊಳ್ಳುವ ಕೆಲಸ ಮಾಡಿ, ಇದಕ್ಕೆ ಬೇಕಾದ ನೆರವನ್ನು ನಾನು ನೀಡುತ್ತೇನೆ ಎಂದರು.


ಕ್ರೀಡೆಯಲ್ಲಿ ದೇಶ ಈಗ ಹೆಚ್ಚು ಪ್ರಗತಿಯನ್ನು ಸಾಧಿಸಿದೆ. ನಮ್ಮ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ದೇಶ 4ನೇ ಸ್ಥಾನದಲ್ಲಿರುವುದು ಇದಕ್ಕೆ ಸಾಕ್ಷಿಯಾಗಿದೆ. ನಿಗದಿತ ಗುರಿ ಇಟ್ಟುಕೊಂಡು, ಇದನ್ನು ಸಾಧಿಸುವ ಛಲದೊಂದಿಗೆ ಸತತ ಪ್ರಯತ್ನ ಮಾಡಿದರೆ ಯಾವ ಸಾಧನೆಯನ್ನಾದರೂ ಮಾಡಬಹುದು. ಇದಕ್ಕೆ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಇಂತಹವರನ್ನು ಆದರ್ಶವಾಗಿಟ್ಟುಕೊಂಡು ಮುನ್ನುಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ಪ್ರತಿ ವರ್ಷವೂ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟವನ್ನು ನಮ್ಮ ಇಲಾಖೆಯಿಂದ ಆಯೋಜನೆ ಮಾಡಲಾಗುತ್ತದೆ. ಚಿಕ್ಕ ತಾಲೂಕಾಗಿರುವ ಯಳಂದೂರಿನಲ್ಲಿ ಕೇವಲ 3 ಪದವಿ ಪೂರ್ವ ಕಾಲೇಜುಗಳಿವೆ. ಇಲ್ಲಿಂದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಈ ಹಿಂದೆ ಸಾಧನೆ ಮಾಡಿದ್ದಾರೆ. ಇಂತಹವರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇದ್ದು ಇಂತಹ ವೇದಿಕೆಗಳ ಮೂಲಕ ಇದನ್ನು ಸಾಬೀತು ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕಾಟಾಚಾರಕ್ಕೆ ಆಯೋಜನೆ, ಆರೋಪ: ಪಟ್ಟಣದಲ್ಲಿ ಈ ಕ್ರೀಡಾಕೂಟ ಕೇವಲ ನಾಮ್ ಕೇ ವಾಸ್ತೆಗೆ ನಡೆಯಿತು. ಕ್ರೀಡೆ ನಡೆಸಲು ಟ್ರ್ಯಾಕ್ ಹಾಕಿರಲಿಲ್ಲ. ಮೈದಾನವನ್ನು ಸ್ವಚ್ಛಗೊಳಿಸಿರಲಿಲ್ಲ. ಈ ಬಗ್ಗೆ ಶಾಸಕರೂ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ ಉದ್ಘಾಟನಾ ಸಮಾರಂಭದಲ್ಲಿ ಚೇರ್‌ಗಳಿಲ್ಲದೆ ಕ್ರೀಡಾಪಟುಗಳನ್ನು ನೆಲದ ಮೇಲೆಯೇ ಕೂರಿಸಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ, ವೈದ್ಯಕೀಯ ಸೌಲಭ್ಯ ಇರಬೇಕೆಂಬ ನಿಯಮವಿದ್ದರೂ ಇದನ್ನು ಗಾಳಿಗೆ ತೂರಲಾಗಿತ್ತು ಎಂದು ಕೆಲವು ಪಾಲಕರು ಆರೋಪಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಪಪಂ ಸದಸ್ಯರಾದ ಮಹೇಶ್, ಲಕ್ಷ್ಮೀಮಲ್ಲು, ಸುಶೀಲಾಪ್ರಕಾಶ್, ಬಿಇಒ ಕಾಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ.ಎಂ. ಮಂಜುನಾಥ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿಜಯ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್. ಮಹೇಶ್, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಸಿದ್ದರಾಜು, ರುದ್ರಯ್ಯ, ಆರ್. ಶಶಿಧರ್ ಸೇರಿದಂತೆ ಅನೇಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net