

ಶಿರಸಿ: ಮಾದಕ ವಸ್ತು ಸೇವನೆಯಿಂದ ಯುವಜನ ದೂರವಿರಬೇಕು. ತಂಬಾಕು, ಗಾಂಜಾ ಮುಂತಾದವುಗಳ ಸೇವನೆಯಿಂದ ಆರೋಗ್ಯದ ಮೇಲೆ ಹಾಗೂ ಆರ್ಥಿಕವಾಗಿ, ಮಾನಸಿಕವಾಗಿ ಪರಿಣಾಮ ಉಂಟಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹೇಳಿದರು.
ನಗರದ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಂಘಟಿಸಿದ್ದ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳು, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು ಎಂಬ ಅಗತ್ಯವನ್ನು ಹಿರಿಮೆಯಾಗಿ ವ್ಯಕ್ತಪಡಿಸಿದರು.
ಸೈಬರ್ ಅಪರಾಧಗಳು ದಿನೇ ದಿನೆ ಹೆಚ್ಚುತ್ತಲೇ ಇವೆ. ನಾವೆಷ್ಟೇ ಜಾಗೃತಿ ಮೂಡಿಸಿದರೂ ಮೋಸ ಹೋಗುವವರು ಜಾಸ್ತಿ ಆಗುತ್ತಲೇ ಇದ್ದಾರೆ. ಆನ್‌ಲೈನ್ ವಂಚನೆ, ಡೇಟಾ ಹ್ಯಾಕಿಂಗ್ ಮತ್ತು ಇತರ ಸೈಬರ್ ಅಪರಾಧಗಳಿಂದ ರಕ್ಷಿಸುವುದು ಹೇಗೆ ಎನ್ನುವುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಸಾಮಾಜಿಕ ಮಾಧ್ಯಮದ ಸದುಪಯೋಗ, ಡಿಜಿಟಲ್ ಸುರಕ್ಷತೆ, ಮಾಹಿತಿಯ ಗೌಪ್ಯತೆ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.
ಡಿಎಸ್‌ಪಿ ಕೆ. ಎಲ್. ಗಣೇಶ್, ಸಿಪಿಐ ಶಶಿಕಾಂತ ವರ್ಮಾ, ಪಿಐ ಸೀತಾರಾಮ, ಪಿಎಸ್‌ಐ ರತ್ನಾ ಎಸ್.ಕೆ., ಕಾಲೇಜು ಪ್ರಾಂಶುಪಾಲ ವಿ. ಆರ್. ಭಟ್ ಇತರರು ಇದ್ದರು.