

ಬೆಟ್ಟದಪುರ: ಮಾದಕ ವಸ್ತುಗಳ ಸೇವನೆಯಿಂದ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಯುವ ಜನಾಂಗ ಮಾದಕ ವಸ್ತುಗಳಿಂದ ದೂರವಿರಬೇಕು. ಪ್ರತಿಯೊಬ್ಬರೂ ಅರೋಗ್ಯದ ಮೇಲೆ ಕಾಳಜಿವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ.ಆರ್.ಶಶಿ ತಿಳಿಸಿದರು.
ಬೆಟ್ಟದಪುರ ಸಮೀಪದ ಭುವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೋಣಸೂರು ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಗ್ರಾಮೀಣ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸಭೆಯಲ್ಲಿ ಮಾತನಾಡಿ, ಸಾಂಕ್ರಾಮಿಕ ರೋಗಗಳ ಬಗ್ಗೆ ವಿಶೇಷವಾಗಿ ಅರಿವು ಹೊಂದಿರಬೇಕು. ಜ್ವರ ಬಂದ ಕೂಡಲೇ ಕಡ್ಡಾಯ ರಕ್ತ ಪರೀಕ್ಷೆಗೆ ರೋಗಿಯನ್ನು ಒಳಪಡಿಸಬೇಕು. ತಾತ್ಸಾರ ಮಾಡದೆ ವೈದ್ಯರ ಸಲಹೆ ಹಾಗೂ ಚಿಕಿತ್ಸೆ ಪಡೆಯಲು ಗ್ರಾಮದ ಮುಖಂಡರು ಹಾಗೂ ಪಂಚಾಯಿತಿ ಮಟ್ಟದ ಸದಸ್ಯರು ತಿಳಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಸದಾನಂದ, ಮಂಜುನಾಥ, ಪವಿತ್ರಾ, ರೈತ ಸಂಘದ ಅಧ್ಯಕ್ಷ ಆನಂದ್, ಗ್ರಾಮದ ಮುಖಂಡರಾದ ಕೆ.ಬಿ.ವೀರಪ್ಪ, ಮಹದೇವ, ವೀರಭದ್ರಾಚಾರ್, ಮಲ್ಲೇಶ್ ಹಾಗೂ ಆಶಾ ಸುಗಮಕಾರರಾದ ನಾಗಮಣಿ, ಅಂಗನವಾಡಿ ಕಾರ್ಯಕರ್ತೆ ಧನಲಕ್ಷ್ಮೀ ಇದ್ದರು.