

ಹನಗೋಡು: ಹೋಬಳಿಯ ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಚೌಡಮ್ಮದೇವಿ ದೇವಾಲಯವನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಉದ್ಘಾಟಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ನನ್ನ ತಾಯಿ ಲಲಿತಮ್ಮ ಹಾಗೂ ನಾನು ವೈಯಕ್ತಿಕವಾಗಿ ದೇವಸ್ಥಾನ ಹಾಗೂ ಅರಳಿಕಟ್ಟೆಗಳನ್ನು ನಿರ್ಮಾಣ ಮಾಡಿಸಿಕೊಟ್ಟಿದ್ದೇವೆ. ಗ್ರಾಮಸ್ಥರು ದೇವಾಲಯ ಜೀರ್ಣೋದ್ಧಾರಗೊಂಡ ನಂತರ ನಿತ್ಯ ಪೂಜೆ ಸೇರಿದಂತೆ ದೇವಾಲಯದ ಪರಿಸರವನ್ನು ಶುಚಿಯಾಗಿಟ್ಟುಕೊಂಡು ನಿರ್ವಹಣೆ ಮಾಡಬೇಕು. ಅಲ್ಲದೆ ಕಿಕ್ಕೇರಿಕಟ್ಟೆ ಗ್ರಾಮದಲ್ಲಿ ಶಾಸಕರ ಅನುದಾನದಡಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಭಾಗದ ಗ್ರಾಮಗಳು ಅರಣ್ಯ ವ್ಯಾಪ್ತಿಯಲ್ಲಿರುವುದರಿಂದ ಹೆಚ್ಚಿನ ಅಭಿವೃದ್ಧಿಯಾಗಿಲ್ಲ. ಈ ಹಿಂದೆ ಹಲವು ಬಾರಿ ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ಮನವಿ ನೀಡಲಾಗಿದ್ದು, ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಗ್ರಾಮಸ್ಥರು ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜಿ.ಡಿ.ಹರೀಶ್‌ಗೌಡ, ಈಗಿರುವ ಅರಣ್ಯ ಇಲಾಖೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಈ ಭಾಗದ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೇ, ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ಮನೆ ಹಕ್ಕುಪತ್ರ ನೀಡಬೇಕೆಂಬ ಸಾರ್ವಜನಿಕರ ಮನವಿಗೆ, ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಹಾಕದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲಿದ್ದಾರೆ. ಸದ್ಯದಲ್ಲೇ ತಾಲೂಕು ಆಡಳಿತವನ್ನು ಮನೆ ಬಾಗಿಲಿಗೆ ತಂದು ಗ್ರಾಮಗಳ ಸಮಸ್ಯೆಗಳಿಗೆ ಪರಿಹರಿಸಲು ಜನಸಂಪರ್ಕ ಸಭೆಗಳನ್ನು ನಡೆಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಗ್ರಾಪಂ ಸದಸ್ಯ ನಾಗಣ್ಣ, ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ಸುಭಾಷ್, ದಾ.ರಾ ಮಹೇಶ್, ಮುಖಂಡರಾದ ವೃಷಬೇಂದ್ರ, ಜಗದೀಶ್, ರಘು, ಸತೀಶ್ ಇತರರಿದ್ದರು.