

ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಆಶ್ರಯದಲ್ಲಿ, ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಲೈನ್ ವಿರೋಧಿಸಿ ಕುಪ್ಪೆ ಪದವು ಜಂಕ್ಷನ್ನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, 400 ಕೆ.ವಿ. ವಿದ್ಯುತ್ ಪ್ರಸರಣ ಜಾಲದಿಂದ ಜನರಿಗೆ ಇಷ್ಟು ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಯಾಕೆ ಮೌನವಾಗಿದ್ದಾರೆ?. ಕಂಪನಿಯಿಂದ ಹಣ ಪಡೆದು ನಾಯಕತ್ವ ವಹಿಸಿ ಬರುವವರನ್ನು ದೂರ ಇಡಬೇಕು. ಭೂಮಿಗೆ ಅನ್ಯಾಯ ಮಾಡಿದವರು ಯಾರೂ ಸುಖವಾಗಿಲ್ಲ. ಬೇರೆ ಕಂಪನಿಯನ್ನು ಬೆಳೆಸಲು ನಮ್ಮ ಭೂಮಿಯನ್ನು ಮಾರುವುದು ಸರಿಯಲ್ಲ ಎಂದರು.
ಹೋರಾಟಗಾರ ಚಂದ್ರಹಾಸ ಶೆಟ್ಟಿ ಇನ್ನಾ ಮಾತನಾಡಿ, 400 ಕೆ.ವಿ ವಿದ್ಯುತ್ ಪ್ರಸರಣ ಅನುಷ್ಠಾನಗೊಂಡರೆ ತೊಂದರೆಗೆ ಒಳಗಾಗುವುದು ಭೂಮಿ ಮಾರಿದವರಲ್ಲ, ಬದಲಾಗಿ ಸ್ಥಳೀಯರು. ಭೂಮಿ ಮಾಲೀಕರು ಪರಿಹಾರ ಪಡೆದು ಬೇರೆಡೆ ಜೀವನ ಭದ್ರ ಪಡಿಸಿಕೊಳ್ಳುತ್ತಾರೆ. ಸಮಸ್ಯೆ ಅನುಭವಿಸುವವರು ಇಲ್ಲಿ ಇರುವವರು, ಸುತ್ತಮುತ್ತಲಿನ ಜನರು. 46 ಮೀಟರ್ ಅಗಲದ ಕಾರಿಡಾರ್ 115 ಕಿ.ಮಿ. ದೂರದ ವರೆಗೆ ತಂತಿ ಹಾದು ಹೋಗುವ ಪ್ರದೇಶದ ಮನೆ, ದೇವಸ್ಥಾನ ದೈವಸ್ಥಾನ ಕೃಷಿ ಸಂಪೂರ್ಣ ನಾಶವಾಗುತ್ತದೆ ಎಂದರು.
ಸುಕೇಶ್ಚಂದ್ರ ಶೆಟ್ಟಿ ಮಾತನಾಡಿ, ಅಗತ್ಯ ಇರುವಲ್ಲಿ ನಾವು ಪ್ರತಿಭಟಿಸಬೇಕು. ಗ್ರಾಮಸ್ಥರೆಲ್ಲ ಒಗ್ಗಟ್ಟಿನಿಂದ ಹೋರಾಟ ಮಾಡಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ ಎಂದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಪ್ರಮುಖರಾದ ದಯಾನಂದ ಶೆಟ್ಟಿ ಕುಳವೂರಗುತ್ತು, ಎಂ.ಸುಬ್ರಹ್ಮಣ್ಯ ಭಟ್, ಮುರುವ ಮಹಾಬಲ ಭಟ್, ರಾಜೀವ ಗೌಡ ವಿಟ್ಲ, ಆಲ್ಫೋನ್ಸ್ ಡಿಸೋಜ, ಕೃಷ್ಣಪ್ರಸಾದ್ ಭಟ್, ರೋಷನ್ ಲೋಬೋ, ಶೇಖಬ್ಬ ಮೊದಲಾದವರು ಉಪಸ್ಥಿತರಿದ್ದರು.
ಕುಳವೂರು ಹಾಗೂ ಕಿಲೆಂಜಾರು ವ್ಯಾಪ್ತಿಯ ರೈತರು ಭಾಗವಹಿಸಿದ್ದರು. ಪ್ರತಿಭಟನೆಯ ಬಳಿಕ ಮುತ್ತೂರು ಹಾಗೂ ಕುಪ್ಪೆಪದವು ಪಿಡಿಒ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಯಾವುದೇ ಯೋಜನೆಗಳು ಅನುಷ್ಠಾನವಾದಾಗ ಅದರ ಮಾಹಿತಿ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು. ಆದರೆ ಜನರಿಗೆ ತಿಳಿಯದ ರೀತಿಯಲ್ಲಿ ಷಡ್ಯಂತ ರೂಪಿಸುವಂತೆ ಬೆರಳೆಣಿಕೆಯ ಪ್ರಸರಣ ಇರುವ ಪತ್ರಿಕೆಯಲ್ಲಿ, ಈ ಯೋಜನೆಯ ಅನುಷ್ಠಾನದ ಬಗ್ಗೆ ಪ್ರಕಟಿಸಲಾಗಿದೆ. ಇದು ಜನರಿಗೆ ಉಪಯೋಗವಾಗುವ ಯೋಜನೆಯಲ್ಲ ಎನ್ನುವುದು ಇದರಲ್ಲೇ ಸಾಬೀತಾಗಿದೆ. ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಬೆಂಬಲಿಸದಿದ್ದರೆ ಅವರು ಕೃತಘ್ನರಾದಂತೆ. ಜಾತಿ, ಧರ್ಮ, ಪಕ್ಷ ಬಿಟ್ಟು ಹೋರಾಟ ಮಾಡಬೇಕು ಎಂದು ಹೋರಾಟಗಾರ ಚಂದ್ರಹಾಸ ಶೆಟ್ಟಿ ಇನ್ನಾ ಹೇಳಿದರು.