ಹೃದಯ ಶ್ರೀಮಂತಿಕೆ ಮೈಗೂಡಿಸಿಕೊಳ್ಳಿ

12sunti01
Published on

ಸುಂಟಿಕೊಪ್ಪ: ಏಕಾಗ್ರತೆಯಿಂದ ಓದುವುದರ ಜತೆಗೆ ಎಲ್ಲ ವಿಚಾರಗಳಲ್ಲೂ ಪರಿಶ್ರಮ ಹಾಕಿದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ನಿವೃತ್ತ ಮುಖ್ಯ ಶಿಕ್ಷಕಿ ಕೆ.ಎ.ಸಾವಿತ್ರಿ ಹೇಳಿದರು.

7ನೇ ಹೊಸಕೋಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪಾಲಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೃದಯ ಶ್ರೀಮಂತಿಕೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಭವಿಷ್ಯದಲ್ಲಿ ಮಾದರಿಯಾಗಿ ಬದುಕಬಹುದು ಎಂದರು.
ಕಾಫಿ ಬೆಳೆಗಾರ ಸುದೀಪ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದವರು ಡಾಕ್ಟರ್ ಹಾಗೂ ಇಂಜಿನಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದರೆ, ಖಾಸಗಿ ಶಾಲೆಗಳಲ್ಲಿ ಓದಿದವರು ಇನ್ಫೋಸಿಸ್‌ನಂತಹ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಉದ್ಯಮಿ ಕಾವೇರಪ್ಪ ಮಾತನಾಡಿ, ವಿದ್ಯೆ ಇಲ್ಲದೆ ಜೀವನದಲ್ಲಿ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ. ಸರ್ಕಾರಿ ಶಾಲೆಯಲ್ಲೇ ಓದಿದ ಡಾ.ಅಂಬೇಡ್ಕರ್ ಮತ್ತು ಅಬ್ದುಲ್ ಕಲಾಂ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು ಎಂದು ಹೇಳಿದರು.

ಸುಂಟಿಕೊಪ್ಪ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ದಾಸಂಡ ರಮೇಶ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ದಾನಿಗಳ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮವನ್ನು 7ನೇ ಹೊಸಕೋಟೆ ಗ್ರಾ.ಪಂ. ಅಧ್ಯಕ್ಷೆ ಸುಮಲತಾ ಉದ್ಘಾಟಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕಲಾ, ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ಲಾ (ಅವಲಕುಟ್ಟಿ), ಪುಷ್ಪಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಜಿ ಅಧ್ಯಕ್ಷೆ ಪುಷ್ಪಾವತಿ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಕೂಡಿಗೆಯ ಡಯೆಟ್ ಉಪನ್ಯಾಸಕ ಕುಮಾರ್, ಕ್ಲಸ್ಟರ್ ಅಧಿಕಾರಿ ಪುರೋಷತ್ತಮ್, ಶಾಲೆ ಮುಖ್ಯ ಶಿಕ್ಷಕಿ ಲೀಲಾವತಿ ಮತ್ತಿತರರು ಇದ್ದರು.

ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳಾದ ಸುದೀಪ್, ಕಾವೇರಪ್ಪ, ಕೆ.ಎ.ಸಾವಿತ್ರಿ, ಸುಮಲತಾ, ದಾಸಂಡ ರಮೇಶ್, ಪುಷ್ಪಾವತಿ, ಕಾಮಾಡ ಸೋಮಯ್ಯ, ಶ್ರೀನಿವಾಸ್, ರವಿಚಂದ್ರ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net