ಕ್ರೆಡಿಟ್ ನೀವೇ ಇಟ್ಟುಕೊಳ್ಳಿ-ನನಗೆ ಅಭಿವೃದ್ಧಿ ಸಾಕು, ಟೀಕೆಗಳು ಸಾಯುತ್ತವೆ-ಕಾರ್ಯಗಳು ಉಳಿಯುತ್ತವೆ, ಎದುರಾಳಿಗಳಿಗೆ ನೈತಿಕತೆಯ ಬೋಧನೆ, ಮೆತ್ತಗೆ ಚಾಟಿ ಬೀಸಿದ ಕೈ ಶಾಸಕ ಯಶವಂತರಾಯಗೌಡ ಪಾಟೀಲ

YASHAVANTRAYAGOUDA PATIL
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.
Published on

ವಿಜಯಪುರ: ‘ಟೀಕೆಗಳು ಸಾಯುತ್ತವೆ-ಕಾರ್ಯಗಳು ಜೀವಂತವಾಗಿರುತ್ತವೆ’ ‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ’ ‘ಕ್ರೆಡಿಟ್ ಬೇಕಾದರೆ ಇಟ್ಟುಕೊಳ್ಳಿ-ನನಗೆ ಅಭಿವೃದ್ಧಿಯಾದರೆ ಸಾಕು’ ‘ಅನುಮೋದನೆ ನಿಮ್ಮದೇಯಾದರೂ ಅನುದಾನ ನಮ್ಮದು’ ‘ಬೇರೆಯವರ ಹೆಸರಲ್ಲಿ ರಾಜಕೀಯ ಮಾಡಬೇಡಿ-ನಾನಂತೂ ಸ್ವಂತ ಬಲದ ಮೇಲೆ ರಾಜಕೀಯ ಮಾಡುತ್ತಿದ್ದೇನೆ’ ‘ಯಾರು ಸಮರ್ಥರು-ಯಾರು ಅಸಮರ್ಥರು ಎಂಬುದು ನಿರ್ಧರಿಸೋದು ಜನ-ಸ್ಪಷ್ಟಪಡಿಸೋದು ಚುನಾವಣೆ....’

ಹೀಗೆ ನೈತಿಕ ರಾಜಕಾರಣದ ಮೃದು ಮಾತುಗಳಿಂದಲೇ ಎದುರಾಳಿಗಳಿಗೆ ಖಡಕ್ ಸಂದೇಶ ರವಾನಿಸಿದವರು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹಾಗೂ ಮುಖಂಡರುಗಳು ತಮ್ಮ ಮೇಲೆ ಮಾಡಿದ ಸಾಲು ಸಾಲು ಆಪಾದನೆಗಳಿಗೆ ಮೃದು ಮಾತಿನಲ್ಲಿಯೇ ಕಠಿಣ ಸಂದೇಶ ರವಾನಿಸಿದರು. ಅಭಿವೃದ್ಧಿ ಸಹಿಸಲಾಗದೇ ಮಾಡುವ ಟೀಕೆಗಳು ಮೌಲ್ಯ ಕಳೆದುಕೊಳ್ಳುತ್ತವೆ. ಸರ್ಕಾರ ಯಾವುದೇ ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ‘ನಾನಂತೂ ಮಾಡಿಲ್ಲ-ನೀವೂ ಮಾಡಬೇಡಿ’ ಎಂದು ಸಲಹೆ ನೀಡಿದರಲ್ಲದೇ ‘ಈ ಯಾವ ಟೀಕೆಗಳೂ ಚುನಾವಣೆಯಲ್ಲಿ ಲೆಕ್ಕಕ್ಕೆ ಬರೋಲ್ಲ’ ಎಂದು ಕಿವಿ ಮಾತು ಸಹ ಹೇಳಿದರು.

ಸಣ್ಣತನ ರಾಜಕೀಯ ಬೇಡ

ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ ಕೊಟ್ಟಿದ್ದು ತಮ್ಮದೇ ಸರ್ಕಾರವಾದರೂ ಅನುದಾನ ನೀಡಿದ್ದು ಕಾಂಗ್ರೆಸ್. ತರಾತುರಿಯಲ್ಲಿ ಭೂಮಿ ಪೂಜೆ ಮಾಡಿ ಚುನಾವಣೆಗೆ ಹೋದ ಬಳಿಕ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಂತ ಹಂತವಾಗಿ ಅನುದಾನ ನೀಡುತ್ತಿರುವುದರಿಂದ ನಮ್ಮ ಪಾಲೂ ಇದೆ. ಈ ಹಿಂದೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿಕೊಂಡಿದ್ದು ರೇವಣಸಿದ್ಧೇಶ್ವರ ಏತ ನೀರಾವರಿ ಸಂದರ್ಭದಲ್ಲಲ್ಲ; ಅಥರ್ಗಾದಲ್ಲಿ ಗೋವಿಂದ ಕಾರಜೋಳ ಅವರು ಕೆರೆಗೆ ನೀರು ತುಂಬುವ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ. ಇಷ್ಟು ಬೇಗ ನೆನಪಿನ ಶಕ್ತಿ ಕುಂದಿತೇ? ಎಂದು ಸಂಸದರ ಕಾಲೆಳೆದರು.

ಇಂಡಿ ಶಾಖಾ ಕಾಲುವೆಗೆ ಡಿಪಿಆರ್ ಸಿದ್ಧಪಡಿಸಲೂ ಸಿದ್ಧ-ನಮ್ಮ ಪಾಲಿನ ಶೇ.40ರಷ್ಟು ಅನುದಾನ ನೀಡಲೂ ಸಿದ್ಧ. ಬೇಕಾದರೆ ತಾವು ನೀಡಿದ ಶೇ.60ರಷ್ಟು ಅನುದಾನಕ್ಕೆ ಪ್ರಚಾರ ಕೊಡಲೂ ಸಿದ್ಧ ಎಂದು ತಿರುಗೇಟು ನೀಡಿದ ಯಶವಂತರಾಯಗೌಡರು, ಅಭಿವೃದ್ಧಿ ಯಾರೇ ಮಾಡಲಿ ಮುಕ್ತವಾಗಿ ಹೊಗಳೋದು ನನ್ನ ಗುಣ. ಅಂತೆಯೇ ನಿತಿನ್ ಗಡ್ಕರಿಯಾದಿಯಾಗಿ ಯಾರೇ ಇದ್ದರೂ ಮುಕ್ತವಾಗಿ ಶ್ಲಾಘಿಸಿರುವುದಾಗಿ ತಿಳಿಸಿದರು.

ಎದುರಾಳಿಗಳಿಗೆ ಮುಕ್ತ ಆಹ್ವಾನ

ಮನಸ್ಸು ಮಾಡಿದ್ದರೆ ಗೋಳಗುಮ್ಮಟವನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಳಿಸಿ ವಿಜಯಪುರ ಜಿಲ್ಲೆಯನ್ನು ಸ್ವಿಟ್ಜರ್ಲೆಂಡ್ ರೀತಿ ಪ್ರವಾಸಿ ತಾಣವಾಗಿಸಬಹುದಿತ್ತು. ಅದನ್ನು ಬಿಟ್ಟು ಕೇವಲ ಪಕ್ಷದ ಕಾರ್ಯಕರ್ತರನ್ನು ಕಟ್ಟಿಕೊಂಡು ರೈಲ್ವೆ ಮೇಲ್ಸೇತುವೆಗೆ ಭೂಮಿ ಪೂಜೆ-ಉದ್ಘಾಟನೆ ನೆರವೇರಿಸುತ್ತಿರಲಿಲ್ಲ. ಒಬ್ಬನೇ ಒಬ್ಬ ರೈಲ್ವೆ ಅಧಿಕಾರಿ ಸಹ ನಿಮ್ಮ ಕಾರ್ಯಕ್ರಮದಲ್ಲಿಲ್ಲ. ನಾನಂತೂ ಮುಕ್ತವಾಗಿ ಸಂಸದರು ಮಾತ್ರವಲ್ಲ ಅವರ ಪಕ್ಷದವರನ್ನೂ ಮಾಧ್ಯಮದ ಮೂಲಕ ಆಹ್ವಾನ ನೀಡುತ್ತಿದ್ದೇನೆ. ಎಲ್ಲರೂ ಸೇರಿ ಅಭಿವೃದ್ಧಿ ಮಾಡೋಣ, ರಾಜಕೀಯ ಮಾತ್ರ ಚುನಾವಣೆ ಬಂದಾಗ ಮಾಡೋಣ ಎಂದರು.

ನಾನಂತೂ ದೃಢಸಂಕಲ್ಪದ ರಾಜಕಾರಣಿ. ಮೊದಲ ಚುನಾವಣೆಯಲ್ಲಿಯೇ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟುವ ಮೂಲಕ ನುಡಿದಂತೆ ನಡೆದಿದ್ದೇನೆ. ತಡವಲಗಾದಲ್ಲಿ ಕೊಟ್ಟ ಮಾತಿನಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಟಾನಗೊಳಿಸಿದ್ದೇನೆ. ಭವಿಷ್ಯದಲ್ಲಿ ಇಂಡಿ ಜಿಲ್ಲೆಯಾಗಲು ಬೇಕಾದ ಎಲ್ಲ ಸಿದ್ಧತೆ ಕೈಗೊಂಡಿದ್ದೇನೆ. ಈ ಸಂತೃಪ್ತಿ-ಸಮಾಧಾನವೊಂದೇ ಸಾಕು. ಸುದೀರ್ಘಾವಧಿ ರಾಜಕಾರಣ ಮಾಡಿಕೊಂಡು ಬಂದಿರುವ, ಸತತವಾಗಿ ಗೆಲ್ಲುತ್ತಲೇ ಬಂದಿರುವ ನಾವು ಮತ್ತು ನೀವು ಸಣ್ಣ ವಿಚಾರಗಳ ಕಡೆಗೆ ಗಮನ ಕೊಡೋದು ಬೇಡ. ಸೋತವರನ್ನು ಕೂರಿಸಿಕೊಂಡು ಹೀಗೆಲ್ಲ ಮಾಡಬೇಡಿ ಎಂದು ಮಾರ್ಮಿಕವಾಗಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net